ಪುತ್ತೂರು: ಪುತ್ತೂರು ನಗರದಲ್ಲಿ ಸಂಚಾರಿ ಪೊಲೀಸರು ಆಟೋ ಚಾಲಕನಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಅ.17 ರಂದು ಸಂಜೆ ವೇಳೆ ಕುರಿಯ ಗ್ರಾಮದ ಆಟೋ ಚಾಲಕ ಬಶೀರ್ ಅವರು ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ರೈ ಮತ್ತು ಸಿಪಿಸಿ 2283 ಶೈಲ ಎಂ.ಕೆ. ಅವರು ಕೈ ಸನ್ನೆ ಮೂಲಕ ನಿಲ್ಲಿಸುವಂತೆ ಸೂಚಿಸಿದರು. ಆದರೆ ಚಾಲಕ ಸೂಚನೆ ಪಾಲಿಸದೇ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದಾನೆ ಎನ್ನಲಾಗಿದ್ದು, ನಂತರ ಸಂಚಾರಿ ಪೊಲೀಸರು ಚಾಲಕನನ್ನು ಹಿಂಬಾಲಿಸಿ ವಾಹನ ತಡೆದು ಅವನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಇಲಾಖೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ 2283 ಶೈಲ ಎಂ.ಕೆ. ಅವರನ್ನು ಕರ್ತವ್ಯದಿಂದ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Post a Comment