ಮಂಗಳೂರು : ಮಂಗಳೂರು ನಗರ ಉರ್ವಾ ಠಾಣಾ ವ್ಯಾಪ್ತಿಯ ಲಾಲ್ಬಾಗ್ ಹ್ಯಾಟ್ ಹಿಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಿದೇಶಿ ಕರೆನ್ಸಿ ಕಳವು ಪ್ರಕರಣವನ್ನು ಪೊಲೀಸರು ಕೇವಲ 20 ಗಂಟೆಗಳಲ್ಲಿ ಪತ್ತೆಹಚ್ಚಿ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ.19ರ ರಾತ್ರಿ ಕಳ್ಳರು ಹ್ಯಾಟ್ ಹಿಲ್‌ನ ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ಗಳಿಗೆ ನುಗ್ಗಿ ಚಿನ್ನಾಭರಣ, ರೂ.5,000 ನಗದು, 3,000 ದಿರ್ಹಾಮ್ ಹಾಗೂ ಮೊಬೈಲ್ ಫೋನ್ ಕಳವು ಮಾಡಿದ್ದರು. ಈ ಕುರಿತು ರಿಯಾಜ್ ರಶೀದ್ ಅವರ ದೂರಿನ ಮೇರೆಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರು ಶ್ವಾನ ದಳ ಮತ್ತು ಫಿಂಗರ್ ಪ್ರಿಂಟ್ ತಜ್ಞರೊಂದಿಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದರು. ತ್ವರಿತ ಕಾರ್ಯಾಚರಣೆಯ ಫಲವಾಗಿ ಕೇವಲ 20 ಗಂಟೆಗಳಲ್ಲಿ ಆರೋಪಿತರನ್ನು ಬೆಂಗಳೂರಿನಲ್ಲಿ ಬಂಧಿಸಿ ಚಿನ್ನಾಭರಣ, ನಗದು, 70,000 ರೂ. ಮೌಲ್ಯದ 3,000 ದಿರ್ಹಾಮ್ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿತರ ವಿವರಗಳು:
1. ಅಭಿಜಿತ್ ದಾಸ್ (24) — ತಂದೆ ರವೀಂದೋ ದಾಸ್, ನಿವಾಸ: ಪಾಂಚಗೋರಿ, ಮೇಡಿನೋವಾ ರಸ್ತೆ, ಅಂಬಿಕಾ ಪುರ ಪಾರ್ಟ್ 10, ಮೆಹೆರ್ ಪುರ ಅಂಚೆ, ಕಾಚಾರ್ ಜಿಲ್ಲೆ, ಅಸ್ಸಾಂ.
2. ದೇಬಾ ದಾಸ್ (21) — ತಂದೆ ದಿಲಿಪ್ ಕುಮಾರ್ ದಾಸ್, ನಿವಾಸ: ಶ್ರೀ ದುರ್ಗಾ ಮಂದಿರ ಹತ್ತಿರ, ಮೆಹೆರ್ ಪುರ ಗ್ರಾಮ, ಕಾಚಾರ್ ಜಿಲ್ಲೆ, ಅಸ್ಸಾಂ.
ಆರೋಪಿ ಅಭಿಜಿತ್ ದಾಸ್ ವಿರುದ್ಧ ಬೆಂಗಳೂರು ಮತ್ತು ಅಸ್ಸಾಂ ಸೇರಿದಂತೆ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನದಂತೆ ಉರ್ವಾ ಪೊಲೀಸರ ತಂಡವು ಬೆಂಗಳೂರಿನಲ್ಲಿ ನಗರ ಪೊಲೀಸ್‌ರ ಸಹಕಾರದಿಂದ ಆರೋಪಿತರನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಇತರ ಪ್ರಕರಣಗಳಲ್ಲಿಯೂ ಇವರ ಕೈವಾಡವಿರುವ ಸಾಧ್ಯತೆಗಳ ಕುರಿತು ತನಿಖೆ ಮುಂದುವರಿಯುತ್ತಿದೆ.
ಈ ಕಾರ್ಯಾಚರಣೆಯನ್ನು ಡಿ.ಸಿ.ಪಿ. (ಕ್ರೈಂ) ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಉಪವಿಭಾಗದ ಎ.ಸಿ.ಪಿ., ಉರ್ವಾ ಠಾಣೆಯ ಪಿ.ಐ. ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿ ಕೈಗೊಂಡಿದ್ದಾರೆ.
Post a Comment