ಹುಬ್ಬಳ್ಳಿ ತಾಲೂಕಿನ ವರದಾಹಳ್ಳಿ ಗ್ರಾಮದ ಬಳಿ ತಾಯಿ ಹಾಗೂ ಮಗಳು ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಸಾವನ್ನಪ್ಪಿದವರನ್ನು ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಹಾಗೂ ಅವರ ಮಗಳು ಕಾವ್ಯಾ (12) ಎಂದು ಗುರುತಿಸಲಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸವಿತಾ ಅವರು ಗಂಡನ ಮನೆಯಲ್ಲಿ ನಡೆಯುತ್ತಿದ್ದ ದಿನನಿತ್ಯದ ಕಲಹ ಮತ್ತು ಭಿನ್ನಾಭಿಪ್ರಾಯಗಳಿಂದ ಬೇಸತ್ತು ಮನನೊಂದು ಜೀವ ತ್ಯಾಗಕ್ಕೆ ಮುಂದಾಗಿದ್ದಾರೆ. ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಅವರು ಮಗಳು ಕಾವ್ಯಾಳೊಂದಿಗೆ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ಸಹಾಯದಿಂದ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಮಗಳು ಕಾವ್ಯಾಳ ಮೃತದೇಹ ಪತ್ತೆಯಾಗಿದೆ. ತಾಯಿ ಸವಿತಾ ಅವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸವಿತಾ ಅವರಿಗೆ ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಗುವಿನಲ್ಲಿ ಇತ್ತೀಚೆಗಷ್ಟೇ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Post a Comment