Top News

ತೆಂಕುತಿಟ್ಟಿನ ಹಿರಿಯ ಭಾಗವತರು, ರಸರಾಗ ಚಕ್ರವರ್ತಿ ಬಿರುದಾಂಕಿತ ದಿನೇಶ್ ಅಮ್ಮಣ್ಣಾಯ ನಿಧನ

ಮಂಗಳೂರು : 'ರಸರಾಗ ಚಕ್ರವರ್ತಿ' ಬಿರುದಾಂಕಿತ ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತರಾದ ದಿನೇಶ್ ಅಮ್ಮಣ್ಣಾಯರು ಅನಾರೋಗ್ಯದಿಂದಾಗಿ ಗುರುವಾರ ಇಹಲೋಕ ತ್ಯಜಿಸದ್ದಾರೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆ ಯಕ್ಷಗಾನ ಲೋಕಕ್ಕೆ ಭಾರಿ ನಷ್ಟವಾಗಿದೆ. ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕವೂ ಜನ ಮನ ಗೆದ್ದಿದ್ದರು.
ಪೌರಾಣಿಕ ಹಾಗೂ ತುಳು ಪ್ರಸಂಗಗಳಲ್ಲಿ ಛಾಪು ಮೂಡಿಸಿರುವ ಇವರು, ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು.

ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ತೆಂಕುತಿಟ್ಟು ತುಳು ಯಕ್ಷಗಾನವನ್ನು ಉತ್ತುಂಗಕ್ಕೇರಿಸಿದ ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪಳಗಿದ ದಿನೇಶ್ ಅಮ್ಮಣ್ಣಾಯ ತಮ್ಮ ವೃತ್ತಿಜೀವನವನ್ನು ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಆರಂಭಿಸಿದ್ದರು. ಬಳಿಕ ಭಾಗವತಿಕೆಯತ್ತ ಹೊರಳಿದ ಅವರು, ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಯಶಸ್ವಿಯಾಗಿ ಅಗ್ರಮಾನ್ಯರಾದರು.
 'ಕಾಡಮಲ್ಲಿಗೆ', 'ಕಚ್ಚೂರ ಮಾಲ್ದಿ', 'ಪಟ್ಟದ ಪದ್ಮಲೆ' ಹಾಗೂ 'ಮಾನಿಷಾದ' ದಂತಹ ಪ್ರಸಂಗಗಳನ್ನು ತಮ್ಮ ಗಾಯನದಿಂದ ಜನಪ್ರಿಯಗೊಳಿಸಿದ ಕೀರ್ತಿ ಅವರದ್ದು.

ಅಮ್ಮಣ್ಣಾಯರ ಅಗಾಧ ಕಲಾ ಸೇವೆಗೆ ಉಡುಪಿ ತುಳುಕೂಟವು ಪ್ರತಿಷ್ಠಿತ 'ಸಾಮಗ ಪ್ರಶಸ್ತಿ' ನೀಡಿ ಗೌರವಿಸಿತ್ತು. ಮಲ್ಪೆ ರಾಮದಾಸ ಸಾಮಗ, ಅಳಕೆ ರಾಮಯ್ಯ ರೈ, ಕೋಳ್ಯೂರು ರಾಮಚಂದ್ರ ರಾವ್ ಅವರಂತಹ ಮೇರು ಕಲಾವಿದರ ಒಡನಾಟದಲ್ಲಿ ತಮ್ಮ ಕಲಾ ಅನುಭವವನ್ನು ಶ್ರೀಮಂತಗೊಳಿಸಿಕೊಂಡ ಅಮ್ಮಣ್ಣಾಯರು, ಇತ್ತೀಚೆಗೆ ಎಡನೀರು ಮೇಳದಲ್ಲಿ ತಿರುಗಾಟ ಪೂರ್ಣಗೊಳಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಹವ್ಯಾಸಿ ಭಾಗವತರಾಗಿಯೂ ತೊಡಗಿಸಿಕೊಂಡಿದ್ದರು.

Post a Comment

Previous Post Next Post