Top News

ಬಿಲ್ಲವರು–ಮೊಗವೀರರು ಪಕ್ಷಭೇದ ಮರೆತು ಒಂದಾಗಬೇಕು ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಬೇಕು: ಮೊಗವೀರ ರತ್ನ ನಾಡೋಜ ಡಾ. ಜಿ. ಶಂಕರ್

ಮಂಗಳೂರು:ಮಂಗಳೂರು ದಸರಾ ಗೌರವ ಸಮ್ಮಾನ್–2025 ಪ್ರಶಸ್ತಿ ಸ್ವೀಕರಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿದ ಹಿಂದುಳಿದ ವರ್ಗಗಳ ನಾಯಕ, ಮೊಗವೀರ ರತ್ನ ನಾಡೋಜ ಡಾ. ಜಿ. ಶಂಕರ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಂದಿಸಿ ಕ್ಷೇತ್ರದ ದೇವರ ದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, “ಬಿಲ್ಲವ ಹಾಗೂ ಮೊಗವೀರ ಸಮಾಜ ರಾಜಕೀಯ ಭೇದ ಮರೆತು ಒಂದಾಗಬೇಕು. ಇರುವುದು ನಮ್ಮೊಳಗಿನ ರಾಜಕೀಯ ಪ್ರಜ್ಞೆಯ ಕೊರತೆ. ಬಿಲ್ಲವ ಅಭ್ಯರ್ಥಿಗಳು ಚುನಾವಣೆಗೆ ನಿಂತಾಗ ಮೊಗವೀರ ಸಮಾಜ ಸ್ಪಂದಿಸಲಿಲ್ಲ, ಹಾಗೆಯೇ ಮೊಗವೀರ ಅಭ್ಯರ್ಥಿಗಳು ನಿಂತಾಗ ಬಿಲ್ಲವ ಸಮಾಜ ಬೆಂಬಲ ನೀಡಲಿಲ್ಲ. ಇದರ ಪರಿಣಾಮವಾಗಿ ಈ ಎರಡು ಸಮಾಜಗಳಿಗೂ ರಾಜಕೀಯ ಪ್ರತಿನಿಧಿತ್ವ ಸಿಗದೇ ಅಭಿವೃದ್ಧಿ ಹಿಂದುಳಿದಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಉದಯೋನ್ಮುಖ ನಾಯಕ ಪದ್ಮರಾಜ್ ಆರ್. ಪೂಜಾರಿ ಗೆಲ್ಲಬೇಕಾಗಿತ್ತು, ಆದರೆ ಬಿಲ್ಲವ–ಮೊಗವೀರ ಸಮಾಜಗಳ ಏಕತೆ ಕೊರತೆಯಿಂದ ಅವಕಾಶ ತಪ್ಪಿತು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದಲ್ಲಿದ್ದರೂ ಬಿಲ್ಲವ ಮತ್ತು ಮೊಗವೀರ ಸಮಾಜದವರು ಪಕ್ಷಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕು, ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಜಯರಾಜ್ ಸೋಮ ಸುಂದರಂ, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಕಿಶೋರ್ ದಂಡಕೇರಿ, ಕೃತಿನ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಚಂದನ್ ದಾಸ್, ಲೀಲಾಕ್ಷ ಕರ್ಕೇರ, ರಮಾನಾಥ ಕಾರಂದೂರು, ರಾಧಾಕೃಷ್ಣ ಹಾಗೂ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಅಧ್ಯಕ್ಷ ಜಯಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Post a Comment

Previous Post Next Post