ಪುತ್ತೂರು ನಗರದಲ್ಲಿ ಸೋಮವಾರ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಉಡುಗೊರೆ ವಿತರಣೆ ವೇಳೆ ಉಂಟಾದ ನೂಕುನುಗ್ಗಲಿನಿಂದ 13 ಜನರು ಉಸಿರಾಟದ ತೊಂದರೆ ಹಾಗೂ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲೆಯಾಗಿದ್ದಾರೆ.
ಕಾರ್ಯಕ್ರಮವು ವಿಶಾಲವಾದ ಕೊಂಬೆಟ್ಟು ಮೈದಾನದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಭಾಗವಹಿಸಿದ್ದರಿಂದ ಭದ್ರತೆ ಹೆಚ್ಚಿಸಲಾಗಿತ್ತು. ಇದರ ಪರಿಣಾಮವಾಗಿ, ಸ್ಥಳಕ್ಕೆ ನೀರಿನ ಬಾಟಲಿ ತರಲು ಪೊಲೀಸರು ಅವಕಾಶ ನೀಡಿರಲಿಲ್ಲ.
ಮಧ್ಯಾಹ್ನ 12 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಮುಖ್ಯಮಂತ್ರಿ ಬರುವಲ್ಲಿ ತಡವಾದುದರಿಂದ 1 ಗಂಟೆಗೆ ಪ್ರಾರಂಭವಾಯಿತು. ಬೆಳಿಗ್ಗೆಯಿಂದಲೇ ಬಂದು ಕಾಯುತ್ತಿದ್ದ ಜನರು ಬಿಸಿಲಿನಲ್ಲಿ ಅಸಹನೆಯ ಸ್ಥಿತಿಯಲ್ಲಿದ್ದರು. ಒಂದು ಲಕ್ಷ ಜನರಿಗೆ ಉಡುಗೊರೆ ವಿತರಿಸಲಾಗುವುದು ಎಂದು ಸಂಘಟಕರು ಘೋಷಿಸಿದ್ದರಿಂದ ಉಡುಗೊರೆ ಪಡೆಯಲು ಜನರು ಮುಗಿಬಿದ್ದ ಕ್ಷಣದಲ್ಲಿ ನೂಕುನುಗ್ಗಲು ಉಂಟಾಯಿತು.
ತಲೆ ಸುತ್ತಿ ಬಿದ್ದವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನೇಕ ಮಕ್ಕಳು ಮಾರ್ಗಮಧ್ಯೆಯೇ ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಪೋಷಕರು ಅಂಗಡಿಯಿಂದ ನೀರು ಖರೀದಿಸಿ ಕುಡಿಸಿ, ಮುಖಕ್ಕೆ ಚಿಮುಕಿಸಿ ನೆರವಾದರು.
ಆಹಾರ ಹಾಗೂ ನೀರಿನ ಕೊರತೆ ಹಿನ್ನೆಲೆಯಲ್ಲಿ ಹಲವರಿಗೆ ಡಿಹೈಡ್ರೇಶನ್ ಮತ್ತು ಹೈಪೊಗ್ಲೈಸೇಮಿಯಾ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೂವರು ಮಹಿಳೆಯರಿಗೆ ಐವಿ ಫ್ಲೂಯಿಡ್ ನೀಡಲಾಗಿದ್ದು, ಏಳು ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Post a Comment