ಬೆಂಗಳೂರು : ಬೆಂಗಳೂರಿನಲ್ಲಿ ವೈದ್ಯನೊಬ್ಬ ಅನಾರೋಗ್ಯದಿಂದ ಇದ್ದ ವೈದ್ಯೆಯೂ ಆಗಿದ್ದ ತನ್ನ ಪತ್ನಿಯನ್ನು ಇಂಜೆಕ್ಷನ್ ನೀಡಿ ಕೊಂದ ಘಟನೆ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ವಿಕ್ಟೋರಿಯಾ ಆಸ್ಪತ್ರೆಯ ಸರ್ಜನ್ ಆಗಿರುವ ವೈದ್ಯ ಡಾ.ಮಹೇಂದ್ರ ರೆಡ್ಡಿ ತಾನೇ ಇಂಜೆಕ್ಷನ್ ನೀಡಿ ಕೊಂದು ಕುಟುಂಬಸ್ಥರ ಮುಂದೆ ಸಹಜ ಸಾವೆಂದು ನಾಟಕವಾಡಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ.
2024ರ ಮೇ 26ರಂದು ಡಾ.ಮಹೇಂದ್ರ ರೆಡ್ಡಿ ಹಾಗೂ ಡಾ.ಕೃತಿಕಾ ರೆಡ್ಡಿ ಮದುವೆ ನಡೆದಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾ ರೆಡ್ಡಿ ಅಜೀರ್ಣ, ಗ್ಯಾಸ್ಟ್ರಿಕ್, ಲೋ ಶುಗರ್‌ನಿಂದ ಬಳಲುತ್ತಿದ್ದರು.
ಆರೋಗ್ಯ ಸಮಸ್ಯೆ ವಿಷಯವನ್ನು ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರ ರೆಡ್ಡಿಗೆ ಮದುವೆ ಮಾಡಿದ್ದರು. ಹೆಂಡತಿಯ ಆರೋಗ್ಯ ಸಮಸ್ಯೆಯ ಬಗ್ಗೆ ಪತಿಗೆ ತಿಳಿದುಬಂದಿತ್ತು. ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರ ರೆಡ್ಡಿ ಆಗಲೇ ಉಪಾಯ ಮಾಡಿದ್ದನು.
ಹುಷಾರಿಲ್ಲದ ಕಾರಣ ತವರು ಮನೆಗೆ ಹೋಗಿ ಮಲಗಿದ್ದ ವೈದ್ಯೆ ಡಾ.ಕೃತಿಕಾರೆಡ್ಡಿಯನ್ನು ನೋಡಲು ಅಲ್ಲಿಗೆ ಬಂದಿದ್ದ ಪತಿರಾಯ ಆಕೆಗೆ ಐವಿ ಇಂಜೆಕ್ಷನ್ ಮೂಲಕ ಎರಡು ದಿನ ಒಂದಷ್ಟು ಔಷಧ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅದಾಗಲೇ ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ಘಟನೆ ಬಗ್ಗೆ ಅಸ್ಪತ್ರೆಯಿಂದ ಡೆತ್ ಮೆಮೊ ಬಂದ ಬೆನ್ನಲ್ಲೇ ಅಸಹಜ ಸಾವು ಎಂದು ಗೊತ್ತಾಗಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಈ ಬಗ್ಗೆ ದೂರು ನೀಡುವಂತೆ ಕುಟುಂಬಸ್ಥರಿಗೆ ತಿಳಿಸಿದ್ದರು. ದೂರಿನ ಅನ್ವಯ ಯುಡಿಆರ್ ದಾಖಲು ಮಾಡಿದ್ದ ಮಾರತಹಳ್ಳಿ ಪೊಲೀಸರು, ಮೃತದೇಹದ ಸ್ಯಾಂಪಲ್ ಪಡೆದು FSLಗೆ ಕಳುಹಿಸಿದ್ದರು. ಈಗ ಅದರ ವರದಿ ಕೈಸೇರಿದ್ದು, ಕೃತಿಕಾ ಸಾವಿಗೆ ದೇಹದಲ್ಲಿ ಕಂಡುಬಂದಿರುವ ಅನಸ್ತೇಶಿಯಾ ಅಂಶ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅಸಹಜ ಸಾವು ಪ್ರಕರಣವನ್ನು ಕೊಲೆಯೆಂದು ಪರಿವರ್ತಿಸಿರೋ ಪೊಲೀಸರು ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.
Post a Comment