Top News

ಶಹಾಪುರ ತಾಲ್ಲೂಕಿನಲ್ಲಿ ಮಹಿಳೆಗೆ ಅಮಾನುಷ ಹಲ್ಲೆ – ಇಬ್ಬರು ಬಂಧನ, 11 ಮಂದಿಯ ವಿರುದ್ಧ ಪ್ರಕರಣ

ರಾಯಚೂರು : ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ಮಹಿಳೆಯೊಬ್ಬರ ಕೂದಲು ಕತ್ತರಿಸಿ, ತಲೆಗೆ ಸುಣ್ಣ ಹಚ್ಚಿ, ಖಾರದ ಪುಡಿ ಹಾಕಿ ಅಮಾನುಷವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೆಂಭಾವಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 11ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗಂಗಾಬಾಯಿ ಶಂಕರ ಚಿನ್ನಾರಾಠೋಡ ಅವರು ಸಂತ್ರಸ್ತೆ. ಕಸ್ತೂರಿಬಾಯಿ ಡಾಕಪ್ಪ ಮತ್ತು ಡಾಕಪ್ಪ ಚಿನ್ನಾರಾಠೋಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಕುಮಾರ ಕಿಶನ್ ರಾಠೋಡ (ರೌಡಿ ಶೀಟರ್) ಸೇರಿದಂತೆ ಇತರೆ ಹತ್ತು ಮಂದಿ ಆರೋಪಿಗಳು ಮೊಬೈಲ್ ಫೋನ್‌ಗಳನ್ನು ಸ್ವಿಚ್‌ ಆಫ್ ಮಾಡಿದ್ದು, ಮುಂಬೈ ಮತ್ತು ಪುಣೆಯಲ್ಲಿ ತಲೆಮರೆಸಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆಯಿಂದಾಗಿ ಗಂಗಾಬಾಯಿ ಅವರು ಆಗಾಗ್ಗೆ ತಮ್ಮ ಚಿಕ್ಕಮ್ಮನ ಮನೆಗೆ ಅಳಿಯ ಅನಿಲ್ ರಾಮು ರಾಠೋಡ ಅವರೊಂದಿಗೆ ಹೋಗುತ್ತಿದ್ದರು. ‘ಅಳಿಯನ ಜೊತೆ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಮರ್ಯಾದೆ ತೆಗೆದಿದ್ದೀಯಾ’ ಎಂದು ನಿಂದಿಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆಂದು ದೂರು ನೀಡಲಾಗಿದೆ.

ಘಟನೆಯಲ್ಲಿ ತಿಪ್ಪಣ್ಣ ಅವರು ಮಹಿಳೆಗೆ ಒದ್ದು ನೆಲಕ್ಕೆ ಕೆಡವಿದರೆ, ಅನುಶಾಬಾಯಿ ಅವರು ತಲೆಯ ಕೂದಲು ಹಿಡಿದುಕೊಂಡು, ರೂಪಿಬಾಯಿ ಅವರು ಕತ್ತರಿಯಿಂದ ಕತ್ತರಿಸಿದ್ದಾರೆ. ಚಾವಳಿ ಬಾಯಿ ಮತ್ತು ದೇವಿಬಾಯಿ ಅವರು ತಲೆಗೆ ಸುಣ್ಣ ಹಚ್ಚಿದ್ದು, ತಿಪ್ಪಿಬಾಯಿ ಅವರು ಖಾರದ ಪುಡಿ ಹಾಕಿದ್ದಾರೆ. ವಿಜಯಕುಮಾರ ಸೇರಿ ಉಳಿದವರು ಮಹಿಳೆಗೆ ಜೀವ ಬೆದರಿಕೆ ಹಾಕಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Post a Comment

Previous Post Next Post