ವಿಟ್ಲ : ಬಂಟ್ವಾಳ ತಾಲ್ಲೂಕಿನ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ ಹಾಗೂ ಬಿಲ್ ಕಲೆಕ್ಟರ್ ವಿಲಿಯಂ ಲಂಚದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿದ್ದಾರೆ.
ಮಾಹಿತಿ ಪ್ರಕಾರ, ದೂರುದಾರರ ಮಾವನಿಗೆ ಒಂದು ಎಕರೆ ಕೃಷಿ ಜಮೀನು ಇದ್ದು, ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಕೊಳವೆ ಬಾವಿ ಮಂಜೂರಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಸಂಬಂಧಿತ ವಿಚಾರಕ್ಕಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದಾಗ, ಅಧ್ಯಕ್ಷೆ ನಫೀಸಾ ಅವರು –
“ಕೊಳವೆ ಬಾವಿ ಉಚಿತವಾಗಿ ಸಿಗುತ್ತದೆ. ಆದರೆ ಬೆಂಗಳೂರಿನ ಕಚೇರಿಗೆ ₹10,000 ಕೊಡಬೇಕು. ಹಣ ಕೊಟ್ಟರೆ ನಾನು ಕೆಲಸ ಮಾಡಿಸುತ್ತೇನೆ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅದನಂತರ ನಫೀಸಾ ಅವರು ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ದೂರುದಾರರಿಂದ ಹಣ ಸ್ವೀಕರಿಸಲು ಸೂಚಿಸಿದ್ದರು. ದೂರುದಾರರಿಂದ ₹10,000 ಲಂಚ ಸ್ವೀಕರಿಸುವ ವೇಳೆ ವಿಲಿಯಂ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಪ್ರಭಾರ ಎಸ್‌ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಡಿವೈಎಸ್‌ಪಿಗಳಾದ ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ. ಹಾಗೂ ಇನ್‌ಸ್ಪೆಕ್ಟರ್‌ಗಳಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ರವಿ ಪವಾರ್ ಮತ್ತು ಸಿಬ್ಬಂದಿ ನಡೆಸಿದ್ದಾರೆ.