ಮಂಗಳೂರು: ಬಜಪೆ ಪೇಟೆ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನು ಸ್ಕೂಟರ್ ಚಲಾಯಿಸುತ್ತಿದ್ದ ಪ್ರಕರಣದಲ್ಲಿ ನ್ಯಾಯಾಲಯವು ವಾಹನ ಮಾಲಕರಾದ ಬಾಲಕನ ಪೋಷಕರಿಗೆ 27,500 ರೂ. ದಂಡವನ್ನು ವಿಧಿಸಿದೆ.
ಇತ್ತೀಚೆಗೆ ಬಜಪೆ ಪೊಲೀಸ್ ಠಾಣೆಯ ಪಿಎಸ್‌ಐ ರವರು ಸಿಬ್ಬಂದಿಗಳೊಂದಿಗೆ ಸಂಜೆ ಬಜಪೆ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ತ್ರಿಪಲ್ ರೈಡ್ ಮಾಡಿಕೊಂಡು ಬಂದ ಸ್ಕೂಟರ್ ಅನ್ನು ತಡೆದು ಪರಿಶೀಲಿಸಿದಾಗ, ಅದನ್ನು ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸುತ್ತಿರುವುದು ಪತ್ತೆಯಾಯಿತು. ಹಿಂಬದಿ ಸೀಟಿನಲ್ಲಿ ಇಬ್ಬರು ಸವಾರರು ಸಹ ಇದ್ದರು.
ತನಿಖೆಯಲ್ಲಿ ಪೋಷಕರೇ ಸ್ಕೂಟರ್ ಅನ್ನು ಅಪ್ರಾಪ್ತನಿಗೆ ಚಾಲನೆ ಮಾಡಲು ನೀಡಿರುವುದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ಕಲಂ 199ಎ, 194ಸಿ, 194ಡಿ, 130 ಹಾಗೂ 177 ಐಎಮ್‌ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಸ್ಕೂಟರ್ ಮಾಲಕರಿಗೆ 27,500 ರೂ. ದಂಡ ವಿಧಿಸುವಂತೆ ಆದೇಶಿಸಿದೆ.