ಈ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಾದ ವಿದ್ಯಾ ಕುಮಾರಿ (ರಾಜ್ಯ ಯೋಜನಾ ನಿರ್ದೇಶಕಿ, ಸಮಗ್ರ ಶಿಕ್ಷಣ ಕರ್ನಾಟಕ), ಶಶಿಧರ್ (ಡಿಡಿಪಿಐ, ದಕ್ಷಿಣ ಕನ್ನಡ), ವಿದ್ಯಾ ಶೆಟ್ಟಿ (ಎಪಿಸಿ, ಸಮಗ್ರ ಶಿಕ್ಷಣ ಕರ್ನಾಟಕ), ಸುಷ್ಮಾ ಕಿಣಿ (ಬಿಆರ್‌ಸಿಸಿ, ಮಂಗಳೂರು ದಕ್ಷಿಣ), ವಿಶ್ವನಾಥ್ (ಇಸಿಒ, ಮಂಗಳೂರು ದಕ್ಷಿಣ), ಶ್ರೀಮತಿ ತಹಸೀನ್ (ಬಿಆರ್‌ಪಿ, ಮಂಗಳೂರು ದಕ್ಷಿಣ), ಉಷಾ (ಡೇಟಾ ಎಂಟ್ರಿ ಆಪರೇಟರ್, ಎಸ್‌ಎಸ್‌ಕೆ) ಹಾಗೂ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿಕಾರಿಗಳು ಶಾಲೆಯಲ್ಲಿನ ಅನುದಾನಗಳ ಸಮರ್ಪಕ ಬಳಕೆ, ಜಾರಿಗೆ ತಂದಿರುವ ನವೀನ ಚಟುವಟಿಕೆಗಳು, ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಅನುಸರಿಸಿರುವ ಸೃಜನಶೀಲ ಬೋಧನಾ ವಿಧಾನಗಳು ಇವುಗಳನ್ನು ಪರಿಶೀಲಿಸಿದರು. ವಿಶೇಷವಾಗಿ ಕನ್ನಡ ಹಾಗೂ ಇಂಗ್ಲಿಷ್ ಪಾಠಪುಸ್ತಕಗಳ ಪರಿಣಾಮಕಾರಿ ಬಳಕೆ, ವಿಜ್ಞಾನ ಮತ್ತು ಗಣಿತ ಬೋಧನೆಯಲ್ಲಿ ಅಳವಡಿಸಿಕೊಂಡಿರುವ ಸರಳೀಕೃತ ವಿಧಾನಗಳು ಇವರ ಮೆಚ್ಚುಗೆಗೆ ಪಾತ್ರವಾದವು.
ಶಿಕ್ಷಕರ ತಂಡಭಾವ, ಸಮರ್ಪಣೆ, ನವೀನ ಚಟುವಟಿಕೆಗಳು ಹಾಗೂ ಮುಖ್ಯ ಶಿಕ್ಷಕರ ದೃಢನಿಷ್ಠ ನಾಯಕತ್ವವನ್ನು ಅಧಿಕಾರಿಗಳು ಶ್ಲಾಘಿಸಿದರು. ಜೊತೆಗೆ ಎಸ್.ಡಿ.ಎಂ.ಸಿ ಹಾಗೂ ಸಮುದಾಯ ಸಂಘಟನೆಗಳ ಸಹಕಾರ, ಶಾಲೆಯ ಒಟ್ಟಾರೆ ಶೈಕ್ಷಣಿಕ ವಾತಾವರಣವನ್ನು ಅವರು ಮೆಚ್ಚಿಕೊಂಡರು.
“ನಾಲ್ಯಪದವು ಶಾಲೆ ನಿಜವಾದ ರಾಷ್ಟ್ರಮಟ್ಟದಲ್ಲಿ ಪಿಎಂ ಶ್ರೀ ಮಾದರಿ ಶಾಲೆ ಹಾಗೂ ಗುಣಾತ್ಮಕತೆಗೆ ಹೆಸರಾದ ಶಿಕ್ಷಣ ಸಂಸ್ಥೆಯಾಗಿದೆ” ಎಂದು ಅಭಿಪ್ರಾಯಪಟ್ಟ ಅವರು, ಮುಂದಿನ ದಿನಗಳಲ್ಲಿ ಶಾಲೆಯು ಇನ್ನಷ್ಟು ಮಾದರಿ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಪ್ರೇರಣೆ ನೀಡಿದರು.