ಬೆಂಗಳೂರು: ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ 50% ರಿಯಾಯಿತಿ ಘೋಷಿಸಿದ ನಂತರ, ವಾಹನ ಸವಾರರಿಂದ ದೊಡ್ಡ ಪ್ರಮಾಣದಲ್ಲಿ ದಂಡ ಪಾವತಿ ನಡೆಯುತ್ತಿದೆ. ಇದುವರೆಗೆ ₹40 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿರುವುದಾಗಿ ಸಂಚಾರ ಇಲಾಖೆ ತಿಳಿಸಿದೆ.
ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಕೆ ಮಾಡುತ್ತಿದ್ದ ಇನೋವಾ ಕ್ರಿಸ್ಟಾ ಕಾರಿನ ಮೇಲೂ 7 ಪ್ರಕರಣಗಳು ದಾಖಲಾಗಿದ್ದವು. 2024ರಿಂದ ಇಂದಿನವರೆಗೂ ದಾಖಲಾಗಿರುವ ಈ ಪ್ರಕರಣಗಳಲ್ಲಿ 6 ಬಾರಿ ಸೀಟು ಬೆಲ್ಟ್ ಧರಿಸದೇ ಸಂಚಾರ ನಿಯಮ ಉಲ್ಲಂಘನೆಯಾಗಿದೆ.
ರಿಯಾಯಿತಿಯಂತೆ ಒಟ್ಟು ಪಾವತಿಸಬೇಕಾದ ದಂಡ ₹2,500 ಆಗಿದ್ದು, ಶುಕ್ರವಾರ ಅದನ್ನು ಪಾವತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಕಾರಿನ ಮೇಲಿದ್ದ ದಂಡ ಪ್ರಕರಣಗಳ ಕುರಿತು ಚರ್ಚೆ ನಡೆದ ಬೆನ್ನಲ್ಲೇ ದಂಡ ಪಾವತಿಸಲಾಗಿದೆ ಎಂದು ಸಂಚಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.