ರಾಜ್ಯ ಪಠ್ಯಕ್ರಮದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸೆಪ್ಟೆಂಬರ್ 20ರಿಂದ ಮಧ್ಯಾವಧಿ (ದಸರಾ) ರಜೆ ಆರಂಭವಾಗಲಿದೆ. ಈ ರಜೆ ಅಕ್ಟೋಬರ್ 6ರವರೆಗೆ ಮುಂದುವರಿಯಲಿದ್ದು, ಅಕ್ಟೋಬರ್ 7ರಿಂದ ಶಾಲೆಗಳು ಪುನಃ ಆರಂಭಗೊಳ್ಳಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ.
ಅವಿಭಜಿತ ದ.ಕ. ಜಿಲ್ಲೆಯ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳಿಗೂ ಸೆ. 20ರಿಂದಲೇ ಮಧ್ಯಾವಧಿ ರಜೆ ಆರಂಭವಾಗಲಿದ್ದು, ಅಕ್ಟೋಬರ್ 2ರವರೆಗೆ ತರಗತಿಗಳು ನಡೆಯುವುದಿಲ್ಲ. ಅಕ್ಟೋಬರ್ 3ರಿಂದ ಪಾಠಶಾಲೆಗಳು ಪುನಃ ಆರಂಭವಾಗಲಿವೆ. ಆದರೆ, ಸಿಬಿಎಸ್‌ಇಗೆ ಸಂಬಂಧಿಸಿದ ಕೆಲವು ಆಡಳಿತ ಮಂಡಳಿಗಳು ತಮ್ಮ ವೇಳಾಪಟ್ಟಿಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಳ್ಳುವ ಸಾಧ್ಯತೆ ಇದೆ.
ದೀಪಾವಳಿ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚು ದಿನ ರಜೆ ನೀಡುವ ಪದ್ಧತಿ ಇರುವ ಶಾಲೆಗಳು, ಮಧ್ಯಾವಧಿ ರಜಾವಧಿಯನ್ನು ಕಡಿಮೆ ಮಾಡುವ ಪದ್ಧತಿಯನ್ನು ಅನುಸರಿಸುತ್ತವೆ.