Top News

Drugs | ಮಂಗಳೂರು ಡ್ರಗ್ಸ್ ಜಾಲಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡಾ ಮೂಲದ ಮಹಿಳೆ ಬಂಧನ ; 4 ಕೆಜಿ ಎಂಡಿಎಂಎ ವಶ

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ವಿರೋಧಿ ಕಾರ್ಯಾಚರಣೆ ಮುಂದುವರಿಸಿದ್ದು, ಮಂಗಳೂರಿನ ಡ್ರಗ್ ಪೆಡ್ಡರ್‌ಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಉಗಾಂಡಾ ಮೂಲದ ಮಹಿಳೆಯನ್ನು ಬೆಂಗಳೂರಿನ ಜಿಗಣಿಯಲ್ಲಿ ಬಂಧಿಸಿದ್ದಾರೆ.
ಮುಲ್ಕಿ ಮತ್ತು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 6 ಹಾಗೂ 31ರಂದು ಎಂಡಿಎಂಎ ಡ್ರಗ್ಸ್ ಸಹಿತ ಆರು ಮಂದಿಯನ್ನು ಬಂಧಿಸಲಾಗಿತ್ತು. 
ಮುಲ್ಕಿ ಪೊಲೀಸರು ಕುಂದಾಪುರ ಬೈಂದೂರಿನ ನಾವುಂದ ಗ್ರಾಮದ ಮೊಹಮ್ಮದ್ ಶಿಯಾಬ್ (22), ಉಳ್ಳಾಲ ನರಿಂಗಾನದ ಮೊಹಮ್ಮದ್ ನೌಶಾದ್ (29), ಮಂಗಳೂರು ಬೆಂಗ್ರೆಯ ಇಮ್ರಾನ್ (27), ಬಂಟ್ವಾಳ ಬ್ರಹ್ಮರಕೂಟ್ಟು ರಾಮಲ್ ಕಟ್ಟೆಯ ನಿಸಾರ್ ಅಹ್ಮದ್ (36) ಅವರನ್ನು ಬಂಧಿಸಿ, ಅವರಿಂದ 524 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದರು. ಆರೋಪಿಗಳು ಕೊಲೆ, ಕೊಲೆಯತ್ನ ಹಾಗೂ ಡಕಾಯಿತಿ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರಿಂದ ಇವರ ಮೇಲೆ ಕೆ–ಕೋಕಾ ಕಾಯ್ದೆ ಜಾರಿಗೊಳಿಸಲಾಗಿತ್ತು.

ಸುರತ್ಕಲ್ ಪೊಲೀಸರು ಕಾಪು ಮಜೂರಿನ ಮೊಹಮ್ಮದ್ ಇಟ್ಬಾಲ್ (30) ಮತ್ತು ಪಡುಬಿದ್ರೆ ಕಂಚಿನಡ್ಕದ ಶೆಹರಾಜ್ ಶಾರೂಕ್ (25) ಅವರನ್ನು ಬಂಧಿಸಿ, 200 ಗ್ರಾಂ ಎಂಡಿಎಂಎ ವಶಪಡಿಸಿದ್ದರು. ಇವರಿಗೆ ಡ್ರಗ್ಸ್ ಪೂರೈಕೆ ಬೆಂಗಳೂರಿನಿಂದ ಆಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.

ಖಚಿತ ಮಾಹಿತಿ ಆಧರಿಸಿ, ಬೆಂಗಳೂರು ಹೊರವಲಯದ ಜಿಗಣಿ ಇಂಡಸ್ಟ್ರಿಯಲ್ ಏರಿಯಾದ ಮಧುಮಿತ್ರ ಲೇಔಟ್‌ನಲ್ಲಿ ವಾಸವಿದ್ದ ಉಗಾಂಡಾ ಮೂಲದ ಜಾಲಿಯಾ ಜಲ್ವಾಂಗೋ (34) ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ಬಳಿಯಿಂದ 4 ಕೆಜಿ ಎಂಡಿಎಂಎ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ಸುಮಾರು ನಾಲ್ಕು ಕೋಟಿ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ.

ಜಿಗಣಿ ಸುತ್ತಮುತ್ತಲಿನ ಕಾಡು ಪ್ರದೇಶಗಳಿಂದ ಲೊಕೇಶನ್ ಹಾಕಿ, ತನ್ನ ಇರುವಿಕೆ ಪತ್ತೆಯಾಗದಂತೆ ಪೆಡ್ಡರ್‌ಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು. ಆಕೆ 2020ರಲ್ಲಿ ಟೂರಿಸ್ಟ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದು, ಬಳಿಕ ಅಕ್ರಮವಾಗಿ ಉಳಿದುಕೊಂಡಿದ್ದಳು. ಬಂಧಿತೆಯನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡ್ರಗ್ ಪೆಡ್ಡರ್‌ಗಳನ್ನು ಬಂಧಿಸಿದರೂ, ಪೂರೈಕೆದಾರರ ಕುರಿತು ಸ್ಪಷ್ಟ ಮಾಹಿತಿ ದೊರೆಯದೆ ಇದ್ದು, ಟೆಲಿಗ್ರಾಂ ಮೂಲಕ ಮಾತ್ರ ಸಂಪರ್ಕ ಇರುತ್ತಿದ್ದ ಕಾರಣ ಪತ್ತೆ ಕಷ್ಟವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಡ್ರಗ್ಸ್ ಜಾಲವನ್ನು ಮೂರನೇ ಬಾರಿ ಪತ್ತೆ ಮಾಡಿದ್ದಾರೆ. 2024ರ ಅಕ್ಟೋಬರ್‌ನಲ್ಲಿ ಹೊಸೂರಿನಲ್ಲಿ 6 ಕೆಜಿ ಎಂಡಿಎಂಎ ಹಾಗೂ 2025ರ ಮಾರ್ಚ್‌ನಲ್ಲಿ ಹೊಸೂರಿನಿಂದ ನೈಜೀರಿಯನ್ ಮಹಿಳೆ ಸಹಿತ 37 ಕೆಜಿ ಡ್ರಗ್ಸ್ ಪತ್ತೆಯಾಗಿತ್ತು. ಸುಮಾರು 75 ಕೋಟಿ ರೂ. ಮೌಲ್ಯದ ಈ ಡ್ರಗ್ಸ್ ಬೇಟೆ ರಾಜ್ಯದ ಅತಿದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.

Post a Comment

Previous Post Next Post