ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಲು ನಿರಾಕರಿಸಿದ್ದ ಕಾರಣಕ್ಕೆ ಮಂಗಳೂರಿನ ಕಾವೂರು ನಿವಾಸಿ, ಟೆಕ್ ಕಂಪೆನಿಯ ಉದ್ಯೋಗಿ ಟೆಕ್ಕಿ ಶರ್ಮಿಳಾ (35) ಅವರನ್ನು ಕೊಲೆ ಮಾಡಿದ ಆರೋಪದಲ್ಲಿ 18 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಶರ್ಮಿಳಾ ಅವರು ವಾಸವಿದ್ದ ಸುಬ್ರಹ್ಮಣ್ಯ ಲೇಔಟ್‌ನ ಸಂಕಲ್ಪ ನಿಲಯದ ಎರಡು ಬೆದ್ರೂಮ್ ಫ್ಲಾಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ಮೊದಲಿಗೆ ಶಂಕಿಸಲಾಗಿತ್ತು. ಜನವರಿ 3ರ ರಾತ್ರಿ 10.15ರಿಂದ 10.45ರ ನಡುವೆ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ ವೇಳೆ ಶರ್ಮಿಳಾ ಅವರ ಸುಟ್ಟು ಕರಕಲಾದ ದೇಹ ಪತ್ತೆಯಾಗಿತ್ತು.
ಶರ್ಮಿಳಾ ಅವಿವಾಹಿತೆಯಾಗಿದ್ದು, ಬೆಂಗಳೂರಿನ ಪ್ರಮುಖ ಟೆಕ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ರೂಮ್‌ಮೇಟ್ 2025ರ ನವೆಂಬರ್ 14ರಿಂದ ಅಸ್ಸಾಂನಲ್ಲಿರುವ ತಮ್ಮ ತವರು ಮನೆಯಲ್ಲಿ ಇದ್ದರು. ರೂಮ್‌ಮೇಟ್ ಬಳಕೆ ಮಾಡುತ್ತಿದ್ದ ಬೆದ್ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಶರ್ಮಿಳಾ ಅವರ ಸ್ನೇಹಿತರೊಬ್ಬರು ಘಟನೆಗೆ ದುರುದ್ದೇಶದ ಶಂಕೆ ವ್ಯಕ್ತಪಡಿಸಿದ್ದರಿಂದ ರಾಮಮೂರ್ತಿ ನಗರ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪೊಲೀಸ್ ತನಿಖೆಯಲ್ಲಿ ಶರ್ಮಿಳಾ ಅವರ ನೆರೆಮನೆಯವನಾದ ಕೇರಳ ಮೂಲದ ಕರ್ಣಲ್ ಕುರೈ (18) ಎಂಬಾತ, ಜನವರಿ 3ರ ರಾತ್ರಿ ಸುಮಾರು 9 ಗಂಟೆಗೆ ಕಿಟಕಿಯ ಮೂಲಕ ಫ್ಲಾಟ್‌ಗೆ ನುಗ್ಗಿರುವುದು ಪತ್ತೆಯಾಗಿದೆ. ಆತ ಶರ್ಮಿಳಾ ಅವರನ್ನು ಲೈಂಗಿಕವಾಗಿ ಸಹಕರಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಶರ್ಮಿಳಾ ನಿರಾಕರಿಸಿದಾಗ, ಆಕೆಯ ಬಾಯಿ ಹಾಗೂ ಮೂಗನ್ನು ಬಿಗಿಯಾಗಿ ಹಿಡಿದು ಅರೆ ಪ್ರಜ್ಞಾವಸ್ಥೆಗೆ ತಂದುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ನಡೆದ ಜಗಳದಲ್ಲಿ ಆಕೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವ ಉಂಟಾಗಿತ್ತು.
ನಂತರ ಆರೋಪಿಯು ಖಾಲಿ ಬೆದ್ರೂಮ್‌ನಲ್ಲಿ ಶರ್ಮಿಳಾ ಅವರ ಬಟ್ಟೆಗಳು ಹಾಗೂ ಇತರ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಬೆಂಕಿ ಹಚ್ಚಿ, ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಪಿಯುಸಿ ವಿದ್ಯಾರ್ಥಿಯಾಗಿರುವ ಕುರೈ ತನ್ನ ತಾಯಿಯೊಂದಿಗೆ ವಾಸವಿದ್ದು, ಪೊಲೀಸರು ಆತನನ್ನು ಮನೆಯಲ್ಲಿ ಬಂಧಿಸಿ ಮೂರು ದಿನಗಳ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103(1) (ಕೊಲೆ), 64(2) (ಅತ್ಯಾಚಾರ) ಮತ್ತು 238 (ಅಪರಾಧದ ಸಾಕ್ಷ್ಯ ನಾಶಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Post a Comment