ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ತೂಮಿನಾಡು ಹಿಲ್ ಟಾಪ್ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದ ಕೌಟುಂಬಿಕ ಕಲಹದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ.
ಇರಿತಕ್ಕೆ ಒಳಗಾಗಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಶೇಕುಂಞ ಅವರು ಮಂಗಳವಾರ ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದೇ ಘಟನೆಯಲ್ಲಿ ಶೇಕುಂಞ ಅವರ ಪತ್ನಿಯ ಅಕ್ಕನ ಮಗಳು ಜುಮೈಲಾ (17) ಸೋಮವಾರ ಸಂಜೆ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಘಟನೆಯ ಸಂಬಂಧ ಜುಮೈಲಾ ಅವರ ತಂದೆ ಉಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದು, ಮಂಜೇಶ್ವರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿದೇಶದಲ್ಲಿದ್ದ ಉಮರ್ ಫಾರೂಕ್ ಮೂರು ತಿಂಗಳ ಹಿಂದೆ ಊರಿಗೆ ಬಂದ ಬಳಿಕ ಕುಟುಂಬದಲ್ಲಿ ಕೆಲ ವಿಷಯಗಳನ್ನು ಕುರಿತಂತೆ ಕಲಹಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.
ಆಸ್ತಿ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಪತ್ನಿಯ ತಂಗಿಯ ಪತಿ ಶೇಕುಂಞ ನಡುವೆ ಪೂರ್ವದಿಂದಲೂ ವೈಮನಸ್ಸು ಇತ್ತು ಎನ್ನಲಾಗಿದೆ.
ಸೋಮವಾರ ಸಂಜೆ ಇದೇ ವಿಚಾರವಾಗಿ ಉಮರ್ ಫಾರೂಕ್ ಮತ್ತು ಶೇಕುಂಞ ನಡುವೆ ನಡೆದ ವಾಗ್ವಾದ ತಾರಕ್ಕೇರಿದ್ದು, ಈ ವೇಳೆ ಉಮರ್ ಫಾರೂಕ್ ಮಾರಕಾಸ್ತ್ರದಿಂದ ಶೇಕುಂಞ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯನ್ನು ತಡೆಯಲು ಮುಂದಾದ ಪುತ್ರಿ ಜುಮೈಲಾರಿಗೂ ಇರಿತ ನಡೆಸಲಾಗಿದ್ದು, ಆಕೆ ಗಂಭೀರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
Post a Comment