ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆ ಹಾಗೂ ಇತರ ವಯೋಸಹಜ ಕಾಯಿಲೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಮೇಟಿ, 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ವಿಧಾನಸೌಧ ಪ್ರವೇಶಿಸಿದ್ದರು. 1994ರಲ್ಲಿಯೂ ಆಯ್ಕೆಯಾಗಿದ್ದ ಅವರು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ 1996ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು.
ಕ್ಷೇತ್ರ ವಿಂಗಡಣೆ ವೇಳೆ ಗುಳೇದಗುಡ್ಡ ಕ್ಷೇತ್ರ ರದ್ದಾದ ಹಿನ್ನೆಲೆಯಲ್ಲಿ 2008ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 2013ರಲ್ಲಿ ಜಯ ಸಾಧಿಸಿ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2018ರಲ್ಲಿ ಸೋತ ಮೇಟಿ, 2023ರ ಚುನಾವಣೆಯಲ್ಲಿ ಮತ್ತೆ ಗೆದ್ದು ಬಾಗಲಕೋಟೆ ಶಾಸಕರಾದರು.
ಅವರು ಬಾಗಲಕೋಟೆ ಪಟ್ಟಣಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಬಾಗಲಕೋಟೆಯ ತಿಮ್ಮಾಪುರ ಗ್ರಾಮದಲ್ಲಿ ಲಿಂಗಾಯತ ಸಮುದಾಯದ ಸಂಪ್ರದಾಯದಂತೆ ಮೇಟಿ ಅವರ ಅಂತ್ಯಕ್ರಿಯೆ ನಾಳೆ ನೆರವೇರಲಿದೆ ಎಂದು ಮೂಲಗಳು ತಿಳಿಸಿದೆ.
Post a Comment