ಮಂಗಳೂರು: ಭಾರತೀಯ ವೈದ್ಯಕೀಯ ಸಂಘ, ಮಂಗಳೂರು ಶಾಖೆಯ 2025-26 ಸಾಲಿನ ನೂತನ ಅಧ್ಯಕ್ಷರಾಗಿ ನಗರದ ಮೂತ್ರರೋಗ ಶಾಸ್ತ್ರ ತಜ್ಞ ಹಾಗೂ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ.17ರಂದು ಶುಕ್ರವಾರ ನಗರದ ಐ.ಎಮ್.ಎ. ಸಭಾಂಗಣದಲ್ಲಿ ಜರಗಲಿದ್ದು, ಭಾರತೀಯ ವೈದ್ಯಕೀಯ ಸಂಘ, ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷ ಡಾ. ವೆಂಕಟ್ರಾಯ ಪ್ರಭು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ವಿಧಿವಿಧಾನವನ್ನು ನೆರವೇರಿಸಲಿರುವರು.
ಬೆಂಗಳೂರು ಗ್ರಾಮಾಂತರ ಪ್ರದೇಶ ಕ್ಷೇತ್ರದ ಸಂಸದ ಹಾಗೂ ಮಾಜಿ ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಎಂಎಲ್‌ಸಿ ಐವನ್ ಡಿಸೋಜಾ, ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ವೆನ್‌ಲಾಕ್ ಆಸ್ಪತ್ರೆಯ ಆಧೀಕ್ಷಕ ಡಾ. ಶಿವಪ್ರಕಾಶ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ಡಾ.ಪೂಜಾರಿಯವರು ನಿರ್ಗಮಿತ ಅಧ್ಯಕ್ಷರಾದ ಡಾ.ಜೆಸ್ಸಿ ಮರಿಯಾ ಡಿಸೋಜಾ ಅವರಿಂದ ಅಧಿಕಾರ ಸ್ವೀಕರಿಸಲಿರುವರು. ಡಾ. ಪ್ರಕಾಶ್ ಹರಿಶ್‌ಚಂದ್ರ, ಕಾರ್ಯದರ್ಶಿ ಡಾ.ಜೂಲಿಯನ್ ಸಲ್ಮಾನ್ ಕೋಶಾಧಿಕಾರಿಯಾಗಲಿರುವರು. ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಡಾ. ಪ್ರೇಮ ಡಿಕುನ್ನಾ ಅಧಿಕಾರ ವಹಿಸಲಿರುವರು.
ಡಾ. ಪೂಜಾರಿಯವರು ರಾಜ್ಯಮಟ್ಟದ ಡಾ. ಬಿ.ಸಿ. ರಾಯ್ ಪ್ರಶಸ್ತಿ ಹಾಗೂ ರಾಜ್ಯದ ಖ್ಯಾತ ಸುವರ್ಣ ದೃಶ್ಯ ಮಾಧ್ಯಮ ವಾಹಿನಿ ಪ್ರಸ್ತುತ ಪಡಿಸುವ ಹೆಲ್ತ್ ಕೇರ್ ಎಕ್ಸೆಲೆನ್ಸ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದು ಅವರ ವೈದ್ಯಕೀಯ ಸಾಧನೆಗೆ ಸಾಕ್ಷಿ. ಭಾರತೀಯ ವೈದ್ಯಕೀಯ ಸಂಘವು ಸುಮಾರು 1,700 ಸದಸ್ಯರನ್ನು ಒಳಗೊಂಡಿದೆ.
Post a Comment