Top News

ಯಕ್ಷಗಾನದಲ್ಲಿ ಹೊಸ ಬೆಳಕು ಮೂಡಿಸಿದವರು ಲೀಲಾವತಿ ಬೈಪಾಡಿತ್ತಾಯ : ಸಂಸ್ಮರಣಾ ಗೋಷ್ಠಿಯಲ್ಲಿ ಡಾ.ಪ್ರಭಾಕರ ಜೋಶಿ ಅಭಿಪ್ರಾಯ

ಮಂಗಳೂರು, ಅ.12: ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರು ಯಕ್ಷಗಾನದಲ್ಲಿ ಹೊಸ ಬೆಳಕು ಮೂಡಿಸಿದ ಮೇರು ವ್ಯಕ್ತಿತ್ವ ಹೊಂದಿದ್ದರು ಎಂದು ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ಸಹಯೋಗದೊಂದಿಗೆ ಮಂಗಳೂರಿನ ತುಳು ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಮಹಿಳಾ ಭಾಗವತೆ ದಿ. ಲೀಲಾವತಿ ಬೈಪಾಡಿತ್ತಾಯ ಸಂಸ್ಮರಣಾ ಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಧೂರು ಯಕ್ಷಗಾನ ಪರಿಸರದಲ್ಲಿ ಬೆಳೆದ ಲೀಲಾವತಿ ಬೈಪಾಡಿತ್ತಾಯರು ಹಲವು ಸವಾಲುಗಳ ಮಧ್ಯೆ ಪೂರ್ಣಾವಧಿಯಾಗಿ ವೃತ್ತಿಪರ ಯಕ್ಷಗಾನ ಮೇಳದಲ್ಲಿ ತೊಡಗಿಸಿಕೊಂಡ ಮೊದಲ ಮಹಿಳಾ ಭಾಗವತರಾಗಿದ್ದಾರೆ.

ಲೀಲಾವತಿ ಬೈಪಾಡಿತ್ತಾಯರ ಮೊದಲು ಯಕ್ಷಗಾನ ರಂಗಕ್ಕೆ ಹವ್ಯಾಸಿ ಕಲಾವಿದರಾಗಿ ಮಹಿಳೆಯರು ಪ್ರವೇಶಿಸಿದ್ದರು, ಆದರೆ ಲೀಲಾವತಿ ಬೈಪಾಡಿತ್ತಾಯ ಅವರು ವೃತ್ತಿಪರ ಯಕ್ಷಗಾನ ರಂಗದಲ್ಲಿ ಅಚ್ಚಳಿಯದ ನೆನಪು ಉಳಿಯುವಂತಹ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಲೀಲಾವತಿ ಅವರು ವೃತ್ತಿಪರ ಕಲಾವಿದೆಯಾಗಿ 25 ವರ್ಷಗಳ ಕಾಲ ಮೇಳದ ತಿರುಗಾಟ ನಡೆಸಿದ್ದು ಅಸಾಧಾರಣ ದಾಖಲೆ. ವೃತ್ತಿಪರ ಮಹಿಳಾ ಭಾಗವತರಾಗಿ ಮೇಳದ ತಿರುಗಾಟ ನಡೆಸಿದಾಗ ಅವರ ಬಗ್ಗೆ ಸಹಾನುಭೂತಿ ಹಾಗೂ ನಿರೀಕ್ಷೆ ಇತ್ತು. ಯಕ್ಷಗಾನ ಭಾಗವತರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಅವರದ್ದು ಎಂದು ಡಾ. ಎಂ. ಪ್ರಭಾಕರ ಜೋಶಿ ಪ್ರಶಂಸಿಸಿದರು.

ಲೀಲಾವತಿ ಸೇರಿದಂತೆ ಯಕ್ಷಗಾನ ಕಲಾವಿದರ ಮಾಹಿತಿಯನ್ನು ದಾಖಲಿಸುವ ಕೆಲಸ ತುಳು ಅಕಾಡೆಮಿಯಿಂದ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಲೀಲಾವತಿ ಅವರ ಶಿಷ್ಯ ಹಾಗೂ ಸಂಗೀತ ಕಲಾವಿದ ನಾದ ಮಣಿನಾಲ್ಕೂರು ಮಾತನಾಡುತ್ತಾ, “ಲೀಲಾವತಿ ಬೈಪಾಡಿತ್ತಾಯರು ನನ್ನನ್ನು ಸೇರಿದಂತೆ ಅನೇಕ ಕಲಾವಿದರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರಿಂದಾಗಿ ಭಾಗವತಿಕೆಯ ಅನೇಕ ವಿಷಯಗಳಲ್ಲಿ ಸ್ಪಷ್ಟತೆ ನನಗೆ ದೊರಕಿತು” ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೀಲಾವತಿ ಬೈಪಾಡಿತ್ತಾಯ ಅವರ ಪತಿ ಹರಿನಾರಾಯಣ ಬೈಪಾಡಿತ್ತಾಯ, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಸ್. ಸುರೇಂದ್ರ ರಾವ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಲಾವಿದ ನಾದ ಮಣಿನಾಲ್ಕೂರು, ಅವಿನಾಶ್ ಬೈಪಾಡಿತ್ತಾಯ, ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ ಹಾಗೂ ಇತರರು ಉಪಸ್ಥಿತರಿದ್ದರು.
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಬಳಿಕ 'ತ್ಯಾಗೊದ ಬಿಲೆ' ಯಕ್ಷಗಾನ ಪ್ರದರ್ಶನಗೊಂಡಿತು.

Post a Comment

Previous Post Next Post