ಮಂಗಳೂರು: “ದೈವಾರಾಧನೆ ಕುರಿತು ತುಳುನಾಡಿನಲ್ಲಿ ಆಳವಾದ ನಂಬಿಕೆಯಿದೆ. ಇದಕ್ಕೆ ಯಾವತ್ತೂ ಅಪಚಾರವಾಗಬಾರದು. ದೈವದೇವರ ಬಗ್ಗೆ ಅಪಹಾಸ್ಯ ಮಾಡುವುದು ತಪ್ಪು. ಜನರ ನಂಬಿಕೆಗೆ ಧಕ್ಕೆ ಆಗದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು,” ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.
ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ “ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ (ಮಂಗಳೂರು)” ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಕಾಂತಾರ ಸಿನೆಮಾದಿಂದ ದೈವದ ನಿಂದನೆ ಆಗಿಲ್ಲ. ಆದರೆ ತಿಳಿವಳಿಕೆ ಇಲ್ಲದ ಕೆಲವರ ವರ್ತನೆಯಿಂದ ಭಕ್ತರ ಮನಸ್ಸಿಗೆ ನೋವಾಗಿದೆ. ನಾವು ನಂಬಿದ ದೈವಕ್ಕೆ ಏನೂ ಆಗುವುದಿಲ್ಲ; ಆದರೆ ದೈವವನ್ನು ನಂಬಿದ ಭಕ್ತರಿಗೆ ನೋವಾಗುತ್ತದೆ,” ಎಂದು ಹೇಳಿದರು. “ಕಾಂತಾರ ಬಿಡುಗಡೆಯ ಬಳಿಕ ಯುವಜನರಲ್ಲಿ ದೈವದೇವರ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಹೆಚ್ಚಾಗಿದೆ. ಇದು ಉತ್ತೇಜನಕಾರಿಯಾಗಿದೆ. ದೈವದ ಕುರಿತು ನಂಬಿಕೆ ಇಮ್ಮಡಿಯಾಗಿದೆ,” ಎಂದರು.
ಅವರು ಮುಂದುವರಿದು, “ಇಂದಿನ ದಿನಗಳಲ್ಲಿ ಮಕ್ಕಳಿಗೆ ದೈವದೇವರ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದ ಸ್ಥಿತಿ ಕಂಡುಬರುತ್ತಿದೆ. ವಿದ್ಯಾಭ್ಯಾಸ ಹಾಗೂ ಉದ್ಯೋಗದ ಹಂಬಲದಿಂದ ದೈವಸೇವೆಯಲ್ಲಿ ತೊಡಗುವವರ ಸಂಖ್ಯೆ ಕಡಿಮೆಯಾಗಿದೆ. ವಿದ್ಯೆ ಮತ್ತು ಉದ್ಯೋಗ ಮುಖ್ಯವಾದರೂ, ಈ ಮಣ್ಣಿನ ಶಕ್ತಿ — ದೈವಾರಾಧನೆಯೊಂದಿಗೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಎಂ. (ಅಣ್ಣು ಪೂಜಾರಿ) ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಿ. ವೇದವ್ಯಾಸ ಕಾಮತ್, ಉದ್ಯಮಿ ಲಂಚುಲಾಲ್ ಕೆ.ಎಸ್., ಜ್ಯೋತಿಷಿ ಪ್ರಕಾಶ್ ವಿ. ಹೊಳ್ಳ, ಬ್ರಹ್ಮಶ್ರೀ ನಾರಾಯಣಗುರು ವೈದಿಕ ಸಮಿತಿಯ ಹರೀಶ್ ಶಾಂತಿ ಪುತ್ತೂರು, ಕುಳಾಯಿ ಗುತ್ತು ಗಡಿಕಾರ ಪಟೇಲ್ ಶಂಕರ್ ರೈ, ಪಂಬದ ಯಾನೆ ದೈವಾಧಿಗಾರ ಸಂಘ ಗಂಧಕಾಡು ಅಧ್ಯಕ್ಷ ಪುರುಷೋತ್ತಮ ಗೋಳಿಪಲ್ಕೆ, ಪ್ರಮುಖರಾದ ಕೃಷ್ಣ ಅಡಿಗ, ಪಮ್ಮಿ ಕೊಡಿಯಾಲಬೈಲ್, ಬಿ.ಕೆ. ಬೂಬ ಪೂಜಾರಿ ಮಲರಾಯಸ್ಥಾನ ಮುಂತಾದವರು ಉಪಸ್ಥಿತರಿದ್ದರು.
ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯರಿಗೆ ಆರೋಗ್ಯ ವಿಮೆ ವಿತರಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ವಿಜಯ್ ಚೌಟ ಚಾವಡಿದಡಿ ಸ್ವಾಗತಿಸಿ ಪ್ರಸ್ತಾವಿಸಿದರು. ಶ್ರುತನ್ ವಿ. ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
‘ನಂಬಿಕೆಗೆ ಧಕ್ಕೆ ಆಗಬಾರದು’
ತೊಕ್ಕೊಟ್ಟು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಿದರು. “ಕಾಂತಾರ ನಂತರ ಟ್ರಸ್ಟ್ ರಚನೆ ಆಯಿತು ಎಂಬ ಅಭಿಪ್ರಾಯ ಕೆಲವರದು. ಆದರೆ ಈ ಟ್ರಸ್ಟ್ ರಚನೆ ಹಾಗೂ ಕಾರ್ಯಕ್ರಮವು ಸಿನೆಮಾ ಬರುವ ಮುನ್ನವೇ ನಿಗದಿಯಾಗಿತ್ತು,” ಎಂದು ಸ್ಪಷ್ಟಪಡಿಸಿದರು.
“ದೈವಾರಾಧನೆ ಕುರಿತ ಚರ್ಚೆಗಳು ವಿವಿಧ ಕಡೆಗಳಲ್ಲಿ ನಡೆಯುತ್ತಿರುವುದರಿಂದ ಹೆಚ್ಚು ಜಾಗ್ರತಿ ಹಾಗೂ ನಿಷ್ಠೆ ಅಗತ್ಯ. ಭಕ್ತರ ನಂಬಿಕೆಗೆ ಯಾವತ್ತೂ ಧಕ್ಕೆ ಆಗದಂತೆ, ವಿಶ್ವಾಸದಿಂದ ಸಮಾಜ ನೋಡಬಹುದಾದ ರೀತಿಯಲ್ಲಿ ದೈವಪರಿಚಾರಕರು ಸೇವೆ ಸಲ್ಲಿಸಬೇಕು,” ಎಂದು ಅವರು ಹೇಳಿದರು.
Post a Comment