Top News

ಅ.17ರಿಂದ ಕದ್ರಿಯಲ್ಲಿ "ಕದ್ರಿ ಸಹೋತ್ಸವ -ರೈತ ಮೇಳ" ; ರೈತ ಜಾನ್ ಮೊಂತೇರೊಗೆ ರೈತ ಕುಡ್ಲ ಗೌರವ

ಮಂಗಳೂರು: ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ "ಕದ್ರಿ ಸಹೋತ್ಸವ -ರೈತ ಮೇಳ" ಅ.17ರಿಂದ ಅ.19ರವರೆಗೆ ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ ಎಂದು ರೈತಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್ ರಾಜ್ ಸೊರಕೆ ತಿಳಿಸಿದ್ದಾರೆ. 

ಪತ್ರಿಕಾ ಭವನದಲ್ಲಿ ಮಂಗಳವಾ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8ರಿಂದ ರಾತ್ರಿ 8ವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅ. 17ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಕಾರ್ಯಕ್ರಮ ಉದ್ಘಾಟಿಸಲಿದ್ದು, ರೈತಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್ ರಾಜ್ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ ಸಿಒಓ ನರ್ವಡೆ ವಿನಾಯಕ ಕಾರ್ಭಾರಿ ರೈತ ಕುಡ್ಲ ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಂಗಳೂರು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕಾರ್ಯಕಾರಿ ಸದಸ್ಯರಾದ ಜಗನ್ನಾಥ ಗಾಂಭೀರ್, ಜಿ.ಕೆ. ಭಟ್, ರಾಮ ಮೊಗರೋಡಿ, ರೈತಕುಡ್ಲ ಪ್ರತಿಷ್ಠಾನ ಕಾರ್ಯದರ್ಶಿ ಲತೀಶ್ ಭಾಗವಹಿಸಲಿದ್ದಾರೆ.

ಉತ್ಸವದಲ್ಲಿ ಏನೇನಿದೆ ?
ನರ್ಸರಿ ಸಂಸ್ಥೆ ಗಳಿಂದ ಹೂವು, ಅಲಂಕಾರಿಕಾ ಸಸ್ಯಗಳ ಪ್ರದರ್ಶನ ಮಾರಾಟ, ತರಕಾರಿ, ಹಣ್ಣಿನ ಗಿಡಗಳು, ಒಳಾಂಗಣ ಸಸ್ಯ, ಕೈತೋಟ ನಿರ್ಮಾಣಕ್ಕೆ ಪೂರಕ ಗೊಬ್ಬರ, ಯಂತ್ರಗಳು, ಬೀಜಗಳು, ತರಕಾರಿ ಗಿಡಗಳು, ಗೋ ಬ್ಯಾಗ್ ಮಾರಾಟವಿರಲಿದೆ. ಕಸಿ ಕಟ್ಟುವ ಬಗ್ಗೆ ಉಚಿತ ತರಬೇತಿಯು ಇದೆ.
ವಿಶೇಷ ಆಕರ್ಷಣೆಯಾಗಿ ಮಣ್ಣಿನ ಮಡಿಕೆ ತಯಾರಿ, ಹಣತೆ ತಯಾರಿ ಪ್ರಾತ್ಯಕ್ಷಿಕೆ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ, ಕೈಮಗ್ಗದಿಂದ ಸೀರೆ ತಯಾರಿ ಪ್ರಾತ್ಯಕ್ಷಿಕೆ ಇರಲಿದೆ. ನಗರ ಜೇನುಕೃಷಿಗೆ ಪೂರಕವಾಗಿ ಜೇನುಕೃಷಿ ಮಾಹಿತಿ, ಸ್ಥಳೀಯ ರೈತೋದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ, ಖಾದಿ ಉತ್ಪನ್ನಗಳ ಮಾರಾಟ ಏರ್ಪಡಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಅಗತ್ಯವಾದ ಮಣ್ಣಿನ ಹಣತೆ, ಗೂಡುದೀಪ, ಅಲಂಕಾರಿಕ ವಸ್ತುಗಳು ಲಭ್ಯವಿರಲಿದೆ.
ಪಾರ್ಕ್ ನಲ್ಲಿ ಶುಕ್ರವಾರ ಮತ್ತು ಶನಿವಾರ ರಕ್ತದೊತ್ತಡ, ಮಧುಮೇಹ ತಪಾಸಣೆ ಶಿಬಿರ ಕೂಡ ನಡೆಯಲಿದೆ.

ರೈತ ಜಾನ್ ಮೊಂತೇರೋಗೆ ರೈತ ಕುಡ್ಲ ಗೌರವ :
ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ, ಬೇಸಾಯ ಹಾಗೂ ಮನೆಗೆ ನೀರಿನ ಸಮಸ್ಯೆ ಎದುರಾದಾಗ ಸುರಂಗಗಳನ್ನು ಕೊರೆದು ಜಲ ಸಂಗ್ರಹಿಸಿದ ಸಾಧಕ. ಭತ್ತ, ಅಡಕೆ, ತರಕಾರಿ ಬೆಳೆಯುತ್ತಿರುವ 71 ವರ್ಷದ ಕಾಯಕಯೋಗಿ ಜಾನ್ ಮೊಂತೇರೊ ಅವರಿಗೆ ರೈತ ಕುಡ್ಲ ಗೌರವವನ್ನು ಪ್ರದಾನ ಮಾಡಲಾಗುವುದು.

ಹಣತೆ ಸಿಂಧೂರ
ಅ. 18ರಂದು ಹಣತೆ ಸಿಂಧೂರ ವಿಶೇಷ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 6ಗಂಟೆಗೆ ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ದೀಪಾವಳಿ ಆಚರಣೆ ನಡೆಯಲಿದೆ. ಭಿನ್ನ ಸಾಮರ್ಥ್ಯ ದ ಮಕ್ಕಳು ತಯಾರಿಸಿದ ಹಣತೆಯನ್ನು ಸ್ಟಾಲ್ ಗಳಲ್ಲಿ ಮಾರಾಟ ಮಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ,  ನವೀನ್ ಕುಲಶೇಖರ, ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post