ಮೂಡುಬಿದಿರೆ ತಾಲೂಕಿನ ನಿಡೋಡಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ವರು ಯುವಕರು ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದ್ದು, ಸಂಭಾವ್ಯ ಗ್ಯಾಂಗ್‌ರೇಪ್ ಪ್ರಕರಣವನ್ನು ಮೂಡುಬಿದಿರೆ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ಸಮಯಪ್ರಜ್ಞೆಯಿಂದ ಪೊಲೀಸರು ತಪ್ಪಿಸಲು ಯಶಸ್ವಿಯಾಗಿದ್ದಾರೆ.
ಮಾಹಿತಿ ಸಿಕ್ಕ ತಕ್ಷಣ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದ ತಂಡ ನಿಡೋಡಿಯ ಮನೆಯೊಂದರ ಮೇಲೆ ದಾಳಿ ನಡೆಸಿತು. ಅಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ವರು ಯುವಕರು ಇದ್ದರು. ತನಿಖೆಯಲ್ಲಿ ಅವರು ಲೈಂಗಿಕ ದೌರ್ಜನ್ಯಕ್ಕೆ ಸಿದ್ಧತೆ ನಡೆಸುತ್ತಿದ್ದರೆಂಬುದು ಪತ್ತೆಯಾಗಿದೆ. ಸ್ಥಳದಿಂದ ಲೈಂಗಿಕ ಕ್ರಿಯೆಗೆ ಬಳಸುವ ಕೆಲ ವಸ್ತುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ನಿಡ್ಡೋಡಿಯ ಮಹೇಶ್, ಕಟೀಲು ಪ್ರದೇಶದ ಯಜ್ಞೇಶ್, ದಿಲೀಪ್ ಹಾಗೂ ಶ್ರೀಕಾಂತ್ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಅವರು ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಹೇಶ್ ತನ್ನ ಮನೆಯನ್ನು ಈ ಕೃತ್ಯಕ್ಕೆ ಬಳಸುತ್ತಿದ್ದನೆಂಬುದು ಕೂಡಾ ತನಿಖೆಯಲ್ಲಿ ಬಹಿರಂಗವಾಗಿದೆ.
ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ತಂಡದ ತಕ್ಷಣದ ಕ್ರಮಕ್ಕೆ ಸ್ಥಳೀಯರು ಮತ್ತು ಸಾಮಾಜಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Post a Comment