ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 3ರವರೆಗೆ ಮಂಗಳೂರು ದಸರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿಯವರು ತಿಳಿಸಿದ್ದಾರೆ.
ಸೆ.22ರಂದು ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ನೆರವೇರಲಿದ್ದು, ಮಧ್ಯಾಹ್ನ 12ಕ್ಕೆ ನವದುರ್ಗೆಯರು, ಮಹಾಗಣಪತಿ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ನಡೆಯಲಿದೆ.
ನವರಾತ್ರಿಯ ಅವಧಿಯಲ್ಲಿ ಪ್ರತಿದಿನವೂ ಹೋಮ, ಭಜನೆ, ವಿಶೇಷ ಪೂಜೆಗಳು ನಡೆಯಲಿವೆ. 40ಕ್ಕೂ ಹೆಚ್ಚು ತಂಡಗಳ 1500ಕ್ಕೂ ಹೆಚ್ಚು ಕಲಾವಿದರು ಭರತನಾಟ್ಯ, ಯಕ್ಷಗಾನ, ಜಾನಪದ, ಸಂಗೀತ ಸೇರಿದಂತೆ ವೈವಿಧ್ಯಮಯ ಕಲಾಪ್ರದರ್ಶನ ನೀಡಲಿದ್ದಾರೆ. ಸೆ.23ರಂದು ಬಹುಭಾಷಾ ಕವಿಗೋಷ್ಠಿ ಹಾಗೂ ತುಳು ಕವಿಗೋಷ್ಠಿ ನಡೆಯಲಿದೆ.
ವಿಶೇಷ ಕಾರ್ಯಕ್ರಮಗಳು: ಸೆ.24ರಂದು ಮುದ್ದು ಶಾರದೆ ಸ್ಪರ್ಧೆ, ಸೆ.26ರಂದು ಮಿಸ್ಟರ್ ಮಂಗಳೂರು ದಸರಾ ದೇಹಧ್ಯಾಡ್ಯ ಸ್ಪರ್ಧೆ, ಸೆ.28ರಂದು ದಸರಾ ಮ್ಯಾರಥಾನ್ (ಒಟ್ಟು ರೂ.1 ಲಕ್ಷ ಬಹುಮಾನ) ಹಾಗೂ ಮಕ್ಕಳ ದಸರಾ ನಡೆಯಲಿದೆ.
ಸೆ.22ರಿಂದ ಅ.2ರವರೆಗೆ ಪ್ರತಿದಿನ ಸಂಜೆ ಒಬ್ಬ ಸಾಧಕಿಗೆ ಅಸಾಮಾನ್ಯ ಸ್ತ್ರೀ ಪುರಸ್ಕಾರ – 2025 ಪ್ರದಾನ ಮಾಡಲಾಗುವುದು. ಅ.2ರಂದು ಸಂಜೆ 4ಕ್ಕೆ ನವದುರ್ಗೆಯರು, ಗಣಪತಿ ಮತ್ತು ಶಾರದಾ ಮಾತೆಯರ ಭವ್ಯ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಕ್ಷೇತ್ರಕ್ಕೆ ಮರಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಊರ್ಮಿಳಾ ರಮೇಶ್, ಹರಿಕೃಷ್ಣ ಬಂಟ್ವಾಳ, ಜಗದೀಶ್ ಸುವರ್ಣ, ಕೃತಿ ಅಮೀನ್, ದೇವೇಂದ್ರ ಪೂಜಾರಿ, ಬಿ.ಜಿ.ಸುವರ್ಣ, ಪಿ.ಕೆ. ಗೌತಮಿ, ಶೈಲೇಂದ್ರ ಸುವರ್ಣ, ಹರೀಶ್ ಕುಮಾರ್, ಲತೇಶ್ ಕುಮಾರ್, ಚಂದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು