ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಬೆಚ್ಚಿ ಬೀಳಿಸುವ ವಿವರಗಳು ; 6ನೇ ಸ್ಥಳದಲ್ಲಿ ಶವದ ಅವಶೇಷಗಳು ಪತ್ತೆಯಾಗಿದೆ ಎಂದು ವರದಿ


ಧರ್ಮಸ್ಥಳ, ಜುಲೈ 31: (Mooladhwani) ಧರ್ಮಸ್ಥಳದ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಮೂರನೇ ದಿನದ ಕಾರ್ಯಾಚರಣೆಯಲ್ಲೂ ಮಹತ್ವದ ಬೆಳವಣಿಗೆಯೊಂದನ್ನು ದಾಖಲಿಸಿದೆ. 

ಗುರುವಾರ ನೆತ್ರಾವತಿಯ ಸ್ನಾನಘಟ್ಟದ ಹತ್ತಿರದ ಕಾಡಿನ ಆವರಣದಲ್ಲಿ ಗುರುತಿಸಲಾದ ಆರನೇ ಸ್ಥಳದಲ್ಲಿ ಸಮಾಧಿ ಅಗೆಯುವ ಸಂದರ್ಭದಲ್ಲಿ ಮಾನವ ಅಸ್ಥಿಪಂಜರದ ಭಾಗಗಳು, ತಲೆ ಬುರುಡೆ ಚೂರುಗಳು, ಕೈಕಾಲಿನ ಅಸ್ಥಿಗಳು ಸೇರಿದಂತೆ ಹಲವಾರು ಶಂಕಾಸ್ಪದ ಅವಶೇಷಗಳು ಪತ್ತೆಯಾಗಿವೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಕಳೆದ 20 ವರ್ಷಗಳಲ್ಲಿ ನಾಪತ್ತೆಯಾದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸಲು SIT ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಠಾಣೆ ಪ್ರತ್ಯೇಕವಾಗಿ ದಾಖಲೆ ಪರಿಶೀಲನೆಗೆ ಕೈಹಾಕಿದೆ ಎನ್ನಲಾಗಿದೆ.

SIT ತಂಡ ಕಳೆದ ಮೂರು ದಿನಗಳಿಂದ ಸ್ಥಳೀಯ ಕಾರ್ಮಿಕರ ಸಹಾಯದೊಂದಿಗೆ ಅಗೆತ ಕಾರ್ಯ ನಿರ್ವಹಿಸುತ್ತಿದ್ದು, ಮೊದಲ ಐದು ಸ್ಥಳಗಳಲ್ಲಿ ಯಾವುದೇ ಸಾಕ್ಷ್ಯ ಲಭಿಸದಿದ್ದರೂ ಆರನೇ ಸ್ಥಳದಲ್ಲಿ ಪತ್ತೆಯಾಗಿರುವ ಮಾನವ ಅಸ್ಥಿಗಳಿಂದ ಪ್ರಕರಣ ಹೊಸ ತಿರುವು ಪಡೆಯುವ ಸಾಧ್ಯತೆ ಇದೆ.

ಇಂದು ಬೆಳಿಗ್ಗೆಯಿಂದ ಜಾಗರೂಕತೆಯೊಂದಿಗೆ ನಡೆಯುತ್ತಿರುವ ಅಗೆತ ಕಾರ್ಯಕ್ಕೆ ಡಿಐಜಿ ಅನುಚೇತ್, ಎಸ್ಪಿ ಜಿತೇಂದ್ರ ದಯಾಮ್ ಹಾಗೂ ಪುತ್ತೂರು ಉಪ ವಿಭಾಗದ ಎಸಿ ಸ್ಟೆಲ್ಲಾ ಮೇರಿಸ್ ನೇತೃತ್ವ ನೀಡುತ್ತಿದ್ದಾರೆ. ಆರೋಪದ ಅರ್ಜಿದಾರರ ಸಮ್ಮುಖದಲ್ಲಿಯೇ ಶೋಧ ಕಾರ್ಯ ನಡೆಯುತ್ತಿದ್ದು, ಪ್ರಕರಣ ಸಾರ್ವಜನಿಕರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಪ್ರಕರಣದ ಮಹತ್ವದ ಬೆಳವಣಿಗೆಗಳ ನಡುವೆಯೇ ಮುಂದಿನ ದಿನಗಳಲ್ಲಿ DNA ತಪಾಸಣೆ ಸೇರಿದಂತೆ ಲ್ಯಾಬ್ ವರದಿಗಳು ನಿರ್ಧಾರಾತ್ಮಕ ಭೂಮಿಕೆಯನ್ನು ವಹಿಸಬಹುದೆಂಬ ನಿರೀಕ್ಷೆಯಿದೆ.
Previous Post Next Post