Top News

ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 106 ಕೆಜಿ ಗಾಂಜಾ ವಶ; ಇಬ್ಬರು ಆರೋಪಿಗಳು ಬಂಧನ

ಪುತ್ತೂರು, ಜ.19: ಕಾರು ಹಾಗೂ ಅಶೋಕ್‌ ಲೈಲ್ಯಾಂಡ್‌ ಗೂಡ್ಸ್‌ ವಾಹನದಲ್ಲಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿ 106 ಕಿಲೋ 60 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸಂಜೆ ವೇಳೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸಿದ ವೇಳೆ ಕಾರಿನ ಚಾಲಕ ರಫೀಕ್‌ ಪಿ. (37), ಬೆಳ್ತಂಗಡಿ–ಚಾರ್ಮಾಡಿ ನಿವಾಸಿ ಎಂದು ಗುರುತಿಸಲ್ಪಟ್ಟನು. ಅವನ ವರ್ತನೆ ಸಂಶಯಾಸ್ಪದವಾಗಿದ್ದರಿಂದ ಕಾರನ್ನು ಶೋಧಿಸಿದಾಗ ಸುಮಾರು 100 ಗ್ರಾಂ ತೂಕದ ಗಾಂಜಾ ಪತ್ತೆಯಾಯಿತು.
ಅನಂತರ ಅಶೋಕ್‌ ಲೈಲ್ಯಾಂಡ್‌ ಗೂಡ್ಸ್‌ ವಾಹನವನ್ನು ಪರಿಶೀಲಿಸಿದಾಗ ಅದರ ಚಾಲಕ ಅಬ್ದುಲ್‌ ಸಾದಿಕ್‌ (37), ಬೆಳ್ತಂಗಡಿ–ಚಾರ್ಮಾಡಿ ನಿವಾಸಿ ಎಂದು ತಿಳಿದುಬಂದಿದ್ದು, ವಾಹನದಲ್ಲಿ ಒಟ್ಟು 73 ಕಟ್ಟುಗಳಲ್ಲಿ 106 ಕಿಲೋ 60 ಗ್ರಾಂ ಗಾಂಜಾ ಪತ್ತೆಯಾಯಿತು. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ.53,03,000/- ಆಗಿದೆ.
ವಿಚಾರಣೆ ವೇಳೆ ಆರೋಪಿಗಳು ಕೇರಳ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಾಂಜಾವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಗಾಂಜಾ, ಸಾಗಾಣಿಕೆಗೆ ಬಳಸಿದ ವಾಹನಗಳು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್‌ ಫೋನ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ.09/2026 ಕಲಂ 8(c), 20(b)(ii)C NDPS Act–1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕಾರ್ಯಾಚರಣೆಯನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಗುಣಪಾಲ ಜೆ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ ಹಾಗೂ ವಿನೋದ್‌ ರವರುಗಳನ್ನೊಳಗೊಂಡ ತಂಡ ಯಶಸ್ವಿಯಾಗಿ ನಡೆಸಿತು.

Post a Comment

Previous Post Next Post