ಮಂಗಳೂರು : ಮಂಗಳೂರು ನಗರದಿಂದ ಸುಮಾರು 30 ಕಿಮೀ ದೂರದ ಮೂಡಬಿದ್ರೆ ತಾಲೂಕಿಗೆ ಸೇರಿರುವ ತೀರಾ ಗ್ರಾಮೀಣ ಪ್ರದೇಶವಾಗಿರುವ ಇರುವೈಲು ಗ್ರಾಮಕ್ಕೆ ಸರಿಯಾದ ಬಸ್ ಪ್ರಯಾಣ ಸೇವೆ ಇಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಖಾಸಗಿ ಬಸ್ ಗಳು ಸಂಚರಿಸುತ್ತಿದ್ದರೂ ಅದರ ಪ್ರಮಾಣ ಸಾಲದು. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ನಾನಾ ಉದ್ಯೋಗಳಲ್ಲಿ ತೊಡಗಿಸಿಕೊಂಡವರು ಸೇರಿ ಕೈಕಂಬ, ಮಂಗಳೂರು, ಮೂಡಬಿದ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಇರುವೈಲು ಸುತ್ತಮುತ್ತಲಿನ ಜನತೆ ಅವಲಂಬಿಸಿದ್ದಾರೆ.
ಬೆಳಗ್ಗೆ ಹಾಗೂ ಸಂಜೆ ಬಸ್ ಗಳಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ. ಮಹಿಳೆಯರು, ವಿದ್ಯಾರ್ಥಿಗಳಿಗೆ ಪ್ರಯಾಣಿಸುವುದೇ ತೀರಾ ತ್ರಾಸದಾಯಕ ಆಗಿರುತ್ತದೆ. ಅಲ್ಲದೆ, ಮಧ್ಯಾಹ್ನ, ಭಾನುವಾರ ಸೇರಿದಂತೆ ರಜಾದಿನಗಳಲ್ಲಿ, ದಿನದ ಕೊನೆಯ ಟ್ರಿಪ್ ಗಳಲ್ಲಿ ಖಾಸಗಿ ಬಸ್ ಗಳು ಟ್ರಿಪ್ ಕಟ್ ಮಾಡುವುದರಿಂದ ಗ್ರಾಮಸ್ಥರು ಪರದಾಡುವ, ದುಬಾರಿ ದರ ತೆತ್ತು ಆಟೋದಲ್ಲಿ ಓಡಾಡುವ ಸ್ಥಿತಿ ಇದೆ. ಇದಲ್ಲದೆ, ಸರಕಾರದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಅವಕಾಶದಿಂದಲೂ ಗ್ರಾಮದ ಮಹಿಳೆಯರು ವಂಚಿತರಾಗಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಂಗಳೂರು, ಕುಪ್ಪೆಪದವು ಇರುವೈಲು, ಮೂಡಬಿದ್ರೆ ಮಾರ್ಗವಾಗಿ ಕೆಎಸ್ಆರ್ ಟಿಸಿ ವತಿಯಿಂದ ತಲಾ ಎರಡು ಬಸ್ ಗಳ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಇರುವೈಲು ಗ್ರಾಮ ಶಾಖೆಯ ವತಿಯಿಂದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರ ಭಾಗವಾಗಿ ಸೋಮವಾರ ಬಿಜೈ ನಲ್ಲಿರುವ ಕೆಎಸ್ ಆರ್ ಟಿಸಿ ವಿಭಾಗೀಯ ಕಚೇರಿಯಲ್ಲಿ ಮಂಗಳೂರು ವಿಭಾಗಾಧಿಕಾರಿ ರಾಜೇಶ್ ಶೆಟ್ಟಿಯವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಇರುವೈಲು ಗ್ರಾಮ ಕಾರ್ಯದರ್ಶಿ ಆನಂದ ಪೂಜಾರಿ,ಮುಖಂಡರುಗಳಾದ ಪದ್ಮನಾಭ ಪೂಜಾರಿ ಇರುವೈಲು, ಬೋಜ ಪೂಜಾರಿ, ರಾಜೇಶ್ ನಾಯ್ಕ್ ಇರುವೈಲು ಉಪಸ್ಥಿತರಿದ್ದರು.
Post a Comment