Top News

ಕಾಂಗ್ರೆಸ್ ನಾಯಕರು ಸಂಘದ ವಿರುದ್ಧ ಮಾತನಾಡುವುದು ಕೇವಲ ಮುಸ್ಲಿಂ ಓಲೈಕೆಗಾಗಿ : ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿರುವ ಪ್ರಿಯಾಂಕ್ ಖರ್ಗೆ ಮತ್ತು ಬಿ.ಕೆ. ಹರಿಪ್ರಸಾದ್‌ರಂತಹ ಕಾಂಗ್ರೆಸ್ ನಾಯಕರ ಕ್ರಮ ಕೇವಲ ಮುಸ್ಲಿಮರ ಓಲೈಕೆ ಮತ್ತು ರಾಹುಲ್ ಗಾಂಧಿಯನ್ನು ಮೆಚ್ಚಿಸುವ ಪ್ರಯತ್ನ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ರವರು ಟೀಕಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರಿಗೆ ತಂದೆಯ ಹೆಸರಿನಿಂದ ಮಂತ್ರಿ ಸ್ಥಾನ ಲಭಿಸಿದೆ, ಸ್ವಸಾಮರ್ಥ್ಯದಿಂದ ಅಲ್ಲ ಎಂದು ಅವರು ವ್ಯಂಗ್ಯವಾಡಿದರು. “ಸಂಘದ ಚಟುವಟಿಕೆಗಳೇನು, ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸುವ ಮುನ್ನ ಅವರು ಒಂದು ಶಾಖೆಗೆ ಅಥವಾ ಉತ್ಸವಕ್ಕೆ ಹಾಜರಾಗಿ ಸ್ವಯಂಸೇವಕರ ನಿಸ್ವಾರ್ಥ ಸೇವೆಯನ್ನು ಕಾಣಲಿ,” ಎಂದು ಕಾಮತ್ ಹೇಳಿದರು.

“1962ರ ಚೀನಾ ಯುದ್ಧದ ವೇಳೆಯಲ್ಲಿ ನೆಹರು ಸ್ವಯಂ ಸಂಘದ ಸೇವಾ ಕಾರ್ಯವನ್ನು ಶ್ಲಾಘಿಸಿದ್ದರು. ಸಂಘದ ಎರಡನೇ ಸರಸಂಘಚಾಲಕರಾದ ಗುರುಜಿಯವರ ನಿಧನದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರೇ ಲೋಕಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದರು ಎಂಬುದು ಇತಿಹಾಸ,” ಎಂದು ಅವರು ನೆನಪಿಸಿದರು.
ದೇಶದ ಯಾವುದೇ ಮೂಲೆಯಲ್ಲಿ ಭೂಕಂಪ, ನೆರೆ, ಸುನಾಮಿ ಹೀಗೆ ಯಾವುದೇ ವಿಪತ್ತು ಸಂಭವಿಸಿದರೂ ಸ್ವಯಂಸೇವಕರು ಸದಾ ಸಹಾಯ ಕಾರ್ಯದಲ್ಲಿ ತೊಡಗಿರುತ್ತಾರೆ. ಕಳೆದ ನೂರು ವರ್ಷಗಳಿಂದ ಆರ್.ಎಸ್.ಎಸ್‌ ನಡೆಸಿದ ಸೇವಾ ಚಟುವಟಿಕೆಗಳ ಹತ್ತಿರಕ್ಕೂ ಕಾಂಗ್ರೆಸ್‌ ಪಕ್ಷ ಬರುವುದೇ ಅಸಾಧ್ಯ ಎಂದರು.

“ಸಂಘದ ಟೋಪಿ ಬಗ್ಗೆ ಅವಹೇಳನಕಾರಿ ಮಾತು ಮಾಡುವ ಡಿ.ಕೆ. ಶಿವಕುಮಾರರಿಗೆ ಮುಸ್ಲಿಮರ ಟೋಪಿ ಬಗ್ಗೆ ಮಾತನಾಡುವ ಧೈರ್ಯ ಇದೆಯೇ?” ಎಂದು ಪ್ರಶ್ನಿಸಿದ ಅವರು, “ನಾನೂ ಗಣವೇಶ ಧರಿಸಿ ಪಥಸಂಚಲನದಲ್ಲಿ ಭಾಗವಹಿಸಿದ್ದೇನೆ. ಮುಂದೆಯೂ ಭಾಗವಹಿಸುತ್ತೇನೆ. ತಾಕತ್ತು ಇದ್ದವರು ತಡೆಯಲಿ,” ಎಂದು ಸವಾಲು ಹಾಕಿದರು.

Post a Comment

Previous Post Next Post