ಮಂಗಳೂರು: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಸರ್ಕಾರದ ನಿಲುವು ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಹಿನ್ನಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ಆರಂಭದಲ್ಲಿ ‘ಉಚಿತ ಮತ್ತು ಸರಳ’ ವ್ಯವಸ್ಥೆಯ ಮೂಲಕ ದೇಶದ ಜನರನ್ನು ಡಿಜಿಟಲ್ ವಹಿವಾಟಿನತ್ತ ಸೆಳೆದ ಬಳಿಕ, ಇದೀಗ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವುದು ಸರ್ಕಾರದ ನೀತಿಯಲ್ಲಿನ ಹಿಮ್ಮುಖ ಚಲನೆಯ ಸಂಕೇತವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಲ್ಕವನ್ನು ಗ್ರಾಹಕರ ಬದಲು ವ್ಯಾಪಾರಿಗಳ ಮೇಲೆ (MDR) ವಿಧಿಸಲಾಗುತ್ತದೆ ಎಂಬ ವಾದದಿಂದ ಸಾಮಾನ್ಯ ಜನರಿಗೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ವ್ಯಾಪಾರಿಗಳು ಈ ಹೆಚ್ಚುವರಿ ಹೊರೆಯನ್ನು ದಿನಸಿ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳ ಮೂಲಕ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯುಪಿಐ ವಹಿವಾಟಿಗೆ ಸಂಬಂಧಿಸಿದ ಶುಲ್ಕ ಮತ್ತು ತೆರಿಗೆ ನಿಯಮಗಳು ಸಣ್ಣ ವ್ಯಾಪಾರಿಗಳಲ್ಲಿ ಗೊಂದಲಕ್ಕೆ ಕಾರಣವಾಗಬಹುದು. ಇದರಿಂದ ಕೆಲವು ವ್ಯಾಪಾರಿಗಳು ಡಿಜಿಟಲ್ ಪಾವತಿಗಿಂತ ನಗದು ವಹಿವಾಟಿಗೆ ಆದ್ಯತೆ ನೀಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ನಗದು ವಹಿವಾಟು ಹೆಚ್ಚುವುದರಿಂದ ಪಾರದರ್ಶಕ ಆರ್ಥಿಕ ವ್ಯವಸ್ಥೆಯ ಗುರಿಗೂ ಹಿನ್ನಡೆಯಾಗಬಹುದು. ದೇಶದಲ್ಲಿ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಉತ್ತೇಜಿಸುವ ಬದಲು ಅದನ್ನು ಹೆಚ್ಚುವರಿ ವೆಚ್ಚದ ವ್ಯವಸ್ಥೆಯನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.
ಡಿಜಿಟಲ್ ವಹಿವಾಟು ಸಾಮಾನ್ಯ ಜನರ ದೈನಂದಿನ ಜೀವನದ ಭಾಗವಾಗಿರುವ ಸಂದರ್ಭದಲ್ಲಿ, ಯುಪಿಐ ವ್ಯವಸ್ಥೆಯನ್ನು ಜನಸ್ನೇಹಿ ಹಾಗೂ ಸುಲಭವಾಗಿ ಮುಂದುವರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.
Post a Comment