ಮಂಗಳೂರು: ಮಂಗಳೂರು–ಬಜಪೆ ಸಂಪರ್ಕಿಸುವ ಪ್ರಮುಖ ರಸ್ತೆಯ ಕರಂಬಾರು ಸಮೀಪ ಸೇತುವೆಯೊಂದು ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಈ ಭಾಗದಲ್ಲಿ ಸಂಚಾರಕ್ಕೆ ತೀವ್ರ ತೊಡಕು ಉಂಟಾಗಿದೆ. ಕರಂಬಾರು ಸಮೀಪದ ಪೆಟ್ರೋಲ್ ಪಂಪ್ ಬಳಿಯ ತೋಡಿಗೆ ನಿರ್ಮಿಸಲಾಗಿದ್ದ ಸೇತುವೆ ಬುಧವಾರ ಅಡಿಯಿಂದಲೇ ಕುಸಿದಿದ್ದು, ವಾಹನ ಸಂಚಾರಕ್ಕೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇತುವೆಯ ಕೆಳಭಾಗದ ಮಣ್ಣು ಹಾಗೂ ತಡೆಗೋಡೆ ಕುಸಿದ ಪರಿಣಾಮ ಸೇತುವೆಯ ಒಂದು ಭಾಗ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಸೇತುವೆ ಸಂಪೂರ್ಣವಾಗಿ ದುರ್ಬಲಗೊಂಡಿರುವುದರಿಂದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಮುಖವಾಗಿ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಓಡಾಟಕ್ಕೂ ತಡೆಯಾಗಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಅವಲಂಬಿಸುವಂತಾಗಿದೆ.
ಮಂಗಳೂರು ನಗರದಿಂದ ಬಜಪೆ, ಕರಂಬಾರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸ್ಥಳೀಯರಿಗೆ ಅತ್ಯಂತ ಪ್ರಮುಖವಾಗಿದೆ. ಪ್ರತಿದಿನ ನೂರಾರು ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ಬಸ್‌ಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ. ಸೇತುವೆ ಕುಸಿತದಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಸೇತುವೆ ಕುಸಿದಿರುವ ಸ್ಥಳದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿದೆ. ಸ್ಥಳೀಯರು ಹಾಗೂ ವಾಹನ ಸವಾರರು ಸೇತುವೆ ಸಮೀಪ ತೆರಳದಂತೆ ಸೂಚಿಸಲಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಸೇತುವೆಯ ದುರಸ್ತಿ ಅಥವಾ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ತಕ್ಷಣ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಳೆ ಮುಂದುವರಿದರೆ ಸೇತುವೆ ಕುಸಿದಿರುವ ಪ್ರದೇಶದಲ್ಲಿ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಸಂಚಾರ ವ್ಯವಸ್ಥೆಯನ್ನು ಶೀಘ್ರ ಪುನಃಸ್ಥಾಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Post a Comment