ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ | ತುಳುನಾಡಿನ ಸಜ್ಜನಿಕೆಯ ಹೆಸರನ್ನು ಉಳಿಸಿಕೊಳ್ಳಬೇಕು : ಶಿವಧ್ವಜ್ ಶೆಟ್ಟಿ

ಮಂಗಳೂರು: ತುಳುನಾಡಿನ ಜನರ ಶಿಸ್ತು, ಸಜ್ಜನಿಕೆ ಹಾಗೂ ಉತ್ತಮ ವ್ಯಕ್ತಿತ್ವದ ಬಗ್ಗೆ ಹೊರಗಿನವರಲ್ಲಿ ಅತ್ಯುತ್ತಮ ಅಭಿಪ್ರಾಯವಿದೆ. ಈ ಉತ್ತಮ ಹೆಸರನ್ನು ಮುಂದಿನ ಪೀಳಿಗೆಯೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಖ್ಯಾತ ಚಿತ್ರ ನಟ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಶಿವಧ್ವಜ್ ಶೆಟ್ಟಿ ಹೇಳಿದರು.

ಬಂಟರ ಯಾನೆ ನಾಡವರ ಮಾತೃಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್‌ನಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಶ್ರೀ ಗಣೇಶ ದೇವರು ಹಾಗೂ ಸಿನಿಮಾ ಕ್ಷೇತ್ರ ಸೇರಿದಂತೆ ಸಾಂಸ್ಕೃತಿಕ ರಂಗಕ್ಕೆ ಅವಿನಾಭಾವ ನಂಟಿದೆ. ಗಣೇಶ ದೇವರು ನಮ್ಮೆಲ್ಲರ ಅಚ್ಚುಮೆಚ್ಚಿನ ದೇವರಾಗಿದ್ದು, ಗಣೇಶೋತ್ಸವವು ಧಾರ್ಮಿಕ ಭಕ್ತಿಯ ಜೊತೆಗೆ ಸಾಂಸ್ಕೃತಿಕ ಸೌಹಾರ್ದತೆಯನ್ನೂ ಬೆಳೆಸುವ ವೇದಿಕೆಯಾಗಿದೆ ಎಂದು ಶಿವಧ್ವಜ್ ಶೆಟ್ಟಿ ಹೇಳಿದರು.

ಇನ್ನೋರ್ವ ಅತಿಥಿ ರವಿ ರೈ ಕಲಸ ಮಾತನಾಡಿ, ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುವ ಜೊತೆಗೆ ಸಹಬಾಳ್ವೆ ಮತ್ತು ಸಹೋದರತೆಯೊಂದಿಗೆ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಲ್ಮಠ ಶಾಂತಿ ಕ್ಯಾಥೆಡ್ರಲ್‌ನ ಸೀನಿಯರ್ ಪಾಸ್ಟರ್ ರೆ. ಗೋಲ್ಡಿನ್, ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್, ಕುಂದಾಪುರ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕಿ ಅನುಪಮಾ ಎಸ್. ಶೆಟ್ಟಿ, ನಿವೃತ್ತ ಸೇನಾಧಿಕಾರಿ ಕರ್ನಲ್ ಶರತ್ ಭಂಡಾರಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಬಿಜೈ ಬಂಟರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ರೈ, ವಿವಿಧ ಬಂಟರ ಸಂಘಗಳ ಪ್ರಮುಖರಾದ ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ಮುಕ್ತಾನಂದ ಮೇಲಾಂಟ, ಕಮಲಾಕ್ಷ ಶೆಟ್ಟಿ, ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕರ್ನಲ್ ಶರತ್ ಭಂಡಾರಿ, ರವಿ ರೈ ಕಳಸ ಹಾಗೂ ಶಿವಧ್ವಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್‌ಗುತ್ತು ಸ್ವಾಗತಿಸಿದರು. ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ವಂದಿಸಿದರು. ಡಾ. ಮಂಜುಳಾ ಶೆಟ್ಟಿ ಹಾಗೂ ಪ್ರಕಾಶ್ ಮೇಲಂಟ ಕಾರ್ಯಕ್ರಮ ನಿರೂಪಿಸಿದರು.

Post a Comment

Previous Post Next Post