ಮುಖ್ಯಮಂತ್ರಿಗಾಗಿ ಮಂಗಳೂರಿನ ಕಲಾವಿದೆ ವೀಣಾ ಐತಾಳ್ ಅವರ ವಿಶಿಷ್ಟ ರಂಗೋಲಿ ಕಲಾಕೃತಿ ; 20 ಅಡಿ ವಿಸ್ತೀರ್ಣದಲ್ಲಿ ಯಕ್ಷಗಾನ–ಕಂಬಳದ ಕಲಾ ವೈಭವ; ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿದ್ಧತೆ


ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಅಧಿವೇಶನ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ನಗರದ ಖ್ಯಾತ ರಂಗೋಲಿ ಕಲಾವಿದೆ ವೀಣಾ ಐತಾಳ್ ಅವರು ಮುಖ್ಯಮಂತ್ರಿಯವರ ಭಾವಚಿತ್ರವನ್ನು ರಂಗೋಲಿ ಮೂಲಕ ಮೂಡಿಸಿ ವಿಶೇಷ ಗೌರವ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ವೀಣಾ ಐತಾಳ್ ಅವರು ಮುಖ್ಯಮಂತ್ರಿಯವರ ರಂಗೋಲಿ ಕಲಾಕೃತಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಅದರ ಛಾಯಾಚಿತ್ರಕ್ಕೆ ಚೌಕಟ್ಟು ನಿರ್ಮಿಸಿ ಸೆ.18ರಂದು ಮುಖ್ಯಮಂತ್ರಿಯವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ.

ಇದರ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿರುವ ಮುಖ್ಯಮಂತ್ರಿಯವರ ಅಧಿವೇಶನ ಕಾರ್ಯಕ್ರಮದ ಸಮೀಪ 20 ಅಡಿ ಉದ್ದಗಲದ ಎರಡು ಬೃಹತ್ ರಂಗೋಲಿ ಕಲಾಕೃತಿಗಳನ್ನು ರಚಿಸಲಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಯಕ್ಷಗಾನ ಮತ್ತು ಕಂಬಳದ ವಿನ್ಯಾಸಗಳು ಈ ಬೃಹತ್ ರಂಗೋಲಿಗಳ ಪ್ರಮುಖ ಆಕರ್ಷಣೆಯಾಗಲಿವೆ.

ಈ ವಿಶೇಷ ಕಲಾಕೃತಿಗಳ ರಚನೆಗಾಗಿ ವೀಣಾ ಐತಾಳ್ ಅವರು ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿದ್ಧತೆ ಆರಂಭಿಸಿದ್ದಾರೆ. ಸೆ.18ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಮುನ್ನವೇ ರಂಗೋಲಿ ಕಲಾಕೃತಿಗಳು ಪೂರ್ಣಗೊಳ್ಳುವಂತೆ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ.

ವೀಣಾ ಐತಾಳ್ ಅವರು ಈ ಹಿಂದೆ ಹಲವು ಪ್ರಮುಖ ಸಂದರ್ಭಗಳಲ್ಲಿ ವೈವಿಧ್ಯಮಯ ರಂಗೋಲಿ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಅವರ ರಂಗೋಲಿಯ ವಿಶೇಷತೆ ಎಂದರೆ ಕಡು ಹಾಗೂ ತಿಳಿ ಬಣ್ಣಗಳನ್ನು ಸಮರ್ಪಕವಾಗಿ ಮಿಶ್ರಣಗೊಳಿಸಿ, ಕಲಾಕೃತಿಗೆ ಸಹಜ ಭಾವ, ಆಳ ಮತ್ತು ನೈಜ ಜೀವಂತಿಕೆಯನ್ನು ನೀಡುವ ಕಲಾತ್ಮಕ ಪ್ರೌಢಿಮೆ.

ಮುಖ್ಯಮಂತ್ರಿಯವರ ಭಾವಚಿತ್ರದ ರಂಗೋಲಿ ಹಾಗೂ ತುಳುನಾಡಿನ ಯಕ್ಷಗಾನ–ಕಂಬಳದ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಬೃಹತ್ ರಂಗೋಲಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

Post a Comment

Previous Post Next Post