Mangalore | ಲಕ್ಷಾಂತರ ರೂಪಾಯಿ ಮರಳಿಸಿ ಪ್ರಾಮಾಣಿಕತೆ ಮೆರೆದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿ ಅಬ್ದುಲ್ ಸಲೀಂ ಅದ್ಯಪಾಡಿ

ಮಂಗಳೂರು: ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಹಾಗೂ ಸೊತ್ತುಗಳನ್ನು ವಾರಸುದಾರರಿಗೆ ಮರಳಿಸುವ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಅದ್ಯಪಾಡಿ ನಿವಾಸಿ ಅಬ್ದುಲ್ ಸಲೀಂ ಅವರು ಪ್ರಾಮಾಣಿಕತೆ ಹಾಗೂ ಮಾನವೀಯತೆಗೆ ಮಾದರಿಯಾಗಿದ್ದಾರೆ.
  ರಸ್ತೆಯಲ್ಲಿ ಕಳೆದುಹೋಗಿದ್ದ ದೊಡ್ಡ ಮೊತ್ತದ ಹಣವನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಸಲೀಂ ಅವರು ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಹಾಗೂ ಸೊತ್ತುಗಳು ಕೈಗೆ ಸಿಕ್ಕಿದ್ದರೂ ಯಾವುದೇ ಆಸೆಗೆ ಒಳಗಾಗದೆ ಅವುಗಳನ್ನು ಸುರಕ್ಷಿತವಾಗಿ ಸಂಬಂಧಪಟ್ಟವರಿಗೆ ತಲುಪಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ MSF ಭದ್ರತಾ ವಿಭಾಗದ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ಸಲೀಂ ಅವರ ಈ ಕಾರ್ಯ ಸಾರ್ವಜನಿಕರ ಗಮನ ಸೆಳೆದಿದೆ. ಕರ್ತವ್ಯನಿಷ್ಠೆಯ ಜತೆಗೆ ಸಾರ್ವಜನಿಕರ ಆಸ್ತಿಯ ಬಗ್ಗೆ ತೋರಿದ ಕಾಳಜಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಪ್ರಾಮಾಣಿಕತೆಯೇ ಶಕ್ತಿ, ಸೇವೆಯೇ ಪ್ರೇರಣೆ” ಎಂಬುದನ್ನು ತಮ್ಮ ನಡೆ-ನುಡಿಯ ಮೂಲಕ ಸಾಬೀತುಪಡಿಸಿರುವ ಸಲೀಂ ಅವರ ಕಾರ್ಯಕ್ಕೆ ಟೀಮ್ ಕರಾವಳಿ ಬಜಪೆ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ಹಣ ಅಥವಾ ಬೆಲೆಬಾಳುವ ವಸ್ತುಗಳು ಸಿಕ್ಕಾಗ ಅದನ್ನು ತಮ್ಮದಾಗಿಸಿಕೊಳ್ಳುವ ಬದಲು ವಾರಸುದಾರರನ್ನು ಹುಡುಕಿ ಮರಳಿಸುವ ಸಲೀಂ ಅವರ ನಡೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಅವರ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಇತರರಿಗೂ ಮಾದರಿಯಾಗಲಿ ಎಂಬ ಆಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post