ಮಂಗಳೂರು: ಬಹುನಿರೀಕ್ಷಿತ ತುಳು ಹಾಗೂ ಕನ್ನಡ ಸಿನಿಮಾ ‘ಟಾಸ್’ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಅವಿಕಾ ಪ್ರೊಡಕ್ಷನ್ ಹಾಗೂ ಬಿಆರ್‌ಬಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಅರ್ಜುನ್ ದೇವ್ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮಂಗಳೂರಿನ ಬಿಗ್ ಸಿನೆಮಾಸ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, “ಇಂದು ಎರಡು ವಿಶೇಷ ದಿನ. ಒಂದೆಡೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿದ್ದರೆ, ಮತ್ತೊಂದೆಡೆ ತುಳು ಭಾಷೆಯ ಬಹುನಿರೀಕ್ಷಿತ ‘ಟಾಸ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಡಾ. ದೇವದಾಸ್ ಕಾಪಿಕಾಡ್ ಅವರು ನಮಗೆಲ್ಲ ಹೀರೋ ಇದ್ದಂತೆ. ಅವರು ಮುಟ್ಟಿದ್ದೆಲ್ಲವೂ ಬಂಗಾರವಾಗುತ್ತದೆ. ‘ಟಾಸ್’ ಕೂಡ ‘ಕಾಂತಾರ’ದಂತೆ ಯಶಸ್ಸು ಕಾಣಲಿ” ಎಂದು ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಂಗಭೂಮಿಯ ಹಿರಿಯ ಕಲಾವಿದ ಡಾ. ದೇವದಾಸ್ ಕಾಪಿಕಾಡ್ ಅವರ ‘ಟಾಸ್’ ಸಿನಿಮಾ ಬಿಡುಗಡೆಯಾಗುತ್ತಿರುವುದು ಸಂತಸದ ವಿಚಾರ. ತುಳುವರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸಿದರೆ ಉತ್ತಮ ಚಿತ್ರವೊಂದು ಯಶಸ್ಸು ಕಾಣಲಿದೆ ಎಂದರು.
ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, “‘ಟಾಸ್’ ಸಿನಿಮಾ ಕಾಪಿಕಾಡ್ ಅವರಿಗೆ ಕಾಸು ಮಾಡಿಕೊಡಲಿ. ತುಳುವರಿಗೆ ಹಾಗೂ ಸಮಸ್ತ ತುಳುನಾಡಿಗೆ ಈ ಸಿನಿಮಾ ಹೆಸರು ತಂದುಕೊಡಲಿ. ಅರ್ಜುನ್ ದೇವ್ ಅವರ ನಿರ್ದೇಶನ ಮತ್ತು ನಟನೆಯ ಈ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಚಾರ” ಎಂದರು.
ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದವರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಉತ್ತಮ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.
ಡಾ. ಶಿವಶರಣ್ ಶೆಟ್ಟಿ ಮಾತನಾಡಿ, ಅರ್ಜುನ್ ಕಾಪಿಕಾಡ್ ಅವರು ಸಿನಿಮಾಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ. ದೇವದಾಸ್ ಕಾಪಿಕಾಡ್, ಕದ್ರಿ ಮಣಿಕಾಂತ್, ಭೋಜರಾಜ್ ವಾಮಂಜೂರು, ಶರ್ಮಿಳಾ ಡಿ. ಕಾಪಿಕಾಡ್, ವೀರೇಂದ್ರ ಶೆಟ್ಟಿ ಕಾವೂರು, ಗಿರೀಶ್ ಎಂ. ಶೆಟ್ಟಿ ಕಟೀಲು, ಪ್ರಕಾಶ್ ತೂಮಿನಾಡ್, ಪುಷ್ಪರಾಜ್ ಬೊಳ್ಳಾರ್, ಕಿಶೋರ್ ಕೊಟ್ಡಾರಿ, ರಾಕೇಶ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಮುಖೇಶ್ ಹೆಗ್ಡೆ, ಚಂದ್ರಹಾಸ ಶೆಟ್ಟಿ ರಂಗೋಲಿ, ಬಾಳ ಜಗನ್ನಾಥ ಶೆಟ್ಟಿ, ದಿನೇಶ್ ಶೆಟ್ಟಿ, ಫಯಾಜ್ ಅಬ್ದುಲ್ ರಝಾಕ್ ದುಬಾಯಿ, ಇಝಾಕ್ ಚೈತ್ರ ಶೆಟ್ಟಿ, ಸದಾಶಿವ ಅಮೀನ್, ಜೋಯೆಲ್ ಡಿ’ಸೋಜ, ರೋಶನ್ ಶೆಟ್ಟಿ, ಚೈತ್ರಾ ಶೆಟ್ಟಿ, ಶೈಲಶ್ರೀ ಮುಲ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿತೇಶ್ ಉಳಿಯ ಕಾರ್ಯಕ್ರಮ ನಿರ್ವಹಿಸಿದರು.
ಎರಡು ಹಂತಗಳಲ್ಲಿ ಚಿತ್ರೀಕರಣ
ರಾಜ್ಯ ಪ್ರಶಸ್ತಿ ಪುರಸ್ಕೃತ ‘ತೆಲಿಕೆದ ಬೊಳ್ಳಿ’ ಡಾ. ದೇವದಾಸ್ ಕಾಪಿಕಾಡ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳೊಂದಿಗೆ ‘ಟಾಸ್’ ಸಿನಿಮಾ ಮೂಡಿಬಂದಿದೆ. ಅರ್ಜುನ್ ದೇವ್ ನಿರ್ದೇಶನ ಹಾಗೂ ಅಭಿನಯದ ಚಿತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಚಿತ್ರವನ್ನು ಪಿ ಆ್ಯಂಡ್ ವೈ ವರ್ಲ್ಡ್ ಟೂರ್ಸ್ ಎಲ್‌ಎಲ್‌ಪಿ ಸಹಯೋಗದಲ್ಲಿ ಸಾಗರ್ ಪೂಜಾರಿ ನಿರ್ಮಿಸಿದ್ದಾರೆ. ಛಾಯಾಗ್ರಹಣ ಜೋಯೆಲ್ ಶಮನ್ ಡಿ’ಸೋಜಾ, ಸಂಗೀತ ಕದ್ರಿ ಮಣಿಕಾಂತ್, ಸಂಕಲನ ಯಶ್ವಿನ್ ಕೆ. ಶೆಟ್ಟಿಗಾರ್, ಕಲಾ ನಿರ್ದೇಶನ ರಾಜೇಶ್ ಕೊಳಕೆ ಹಾಗೂ ರಾಜೇಶ್ ಬಾಂಧ್ಯೋಡ್ ಅವರದು.
ಯಶಾಂತ್ ಕಲ್ಲಡ್ಕ, ರಾಕೇಶ್ ಬಿ.ಜೆ. ಹಾಗೂ ವಿಕ್ರಮ್ ದೇವಾಡಿಗ ಸಹ ನಿರ್ದೇಶಕರಾಗಿ, ಸೌರವ್ ರಾಮ್, ಸುಜಿತ್, ವಿನೋದ್ ಹಾಗೂ ಆಶಿಷ್ ರಾವ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂದೀಪ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಅನುಪ್ ಸಾಗರ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ವಿತರಣೆ ಜವಾಬ್ದಾರಿಯನ್ನು ಸಚಿನ್ ಎಎಸ್ ಉಪ್ಪಿನಂಗಡಿ ವಹಿಸಿದ್ದಾರೆ.
ಚಿತ್ರದಲ್ಲಿ ಡಾ. ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ ಹಾಗೂ ಕೃತಿ ಶೆಟ್ಟಿ ಅಭಿನಯಿಸಿದ್ದಾರೆ.
‘ಟಾಸ್’ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ತಯಾರಾಗಿದ್ದು, ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಕೂಡ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ದೇರಳಕಟ್ಟೆ, ಸುಳ್ಯ, ಬೆಳ್ತಂಗಡಿ, ಪುತ್ತೂರು ಸೇರಿದಂತೆ ಕರಾವಳಿಯ ಹಲವು ಪ್ರದೇಶಗಳಲ್ಲಿ ‘ಟಾಸ್’ ಬಿಡುಗಡೆಯಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ಚಿತ್ರ ತೆರೆಕಂಡಿದೆ.
“ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್ ಹಾಗೂ ಥ್ರಿಲ್ಲರ್ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡ ಪಕ್ಕಾ ಫ್ಯಾಮಿಲಿ ಪ್ಯಾಕೇಜ್ ಸಿನಿಮಾ ಇದು. ಎಲ್ಲಾ ಚಿಂತೆಗಳನ್ನು ಬದಿಗಿಟ್ಟು ಪ್ರೇಕ್ಷಕರು ಎಂಜಾಯ್ ಮಾಡಬೇಕೆಂಬ ಉದ್ದೇಶದಿಂದ ಚಿತ್ರವನ್ನು ಸಿದ್ಧಪಡಿಸಲಾಗಿದೆ. ಹಣ ಕೊಟ್ಟು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳೂ ‘ಟಾಸ್’ನಲ್ಲಿವೆ” ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ.
Post a Comment