ದ.ಕ.ಜಿಲ್ಲಾ ಕೇಟರಿಂಗ್ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ; ಅಧ್ಯಕ್ಷರಾಗಿ ಹರೀಶ್ ಶೆಟ್ಟಿ ಏತಮೊಗರುಗುತ್ತು ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಕೇಟರಿಂಗ್ ಮಾಲಕರ ಸಂಘ (ರಿ.), ಮಂಗಳೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಗ್ರಾಂಡ್ ಸಭಾಭವನದಲ್ಲಿ ನಡೆಯಿತು.

ಶಶಿಧರ್ ಶೆಟ್ಟಿ ಬರೋಡ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ನಿಕಟಪೂರ್ವ ಅಧ್ಯಕ್ಷರಿಂದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು.

ಹರೀಶ್ ಶೆಟ್ಟಿ ಏತಮೊಗರುಗುತ್ತು ಅಧ್ಯಕ್ಷರಾಗಿ, ದೇವಿಪ್ರಸಾದ್ ಶೆಟ್ಟಿ ಕಾರ್ಯದರ್ಶಿಯಾಗಿ ಹಾಗೂ ಸಂತೋಷ್ ಮೆನೆಜಸ್ ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಕೇಟರಿಂಗ್ ಉದ್ಯಮ ಹಲವು ಕುಟುಂಬಗಳಿಗೆ ಜೀವನಾಧಾರ: ಶಶಿಧರ್ ಶೆಟ್ಟಿ
ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿಧರ್ ಶೆಟ್ಟಿ ಬರೋಡ, ಕೇಟರಿಂಗ್ ಉದ್ಯಮ ಕೇವಲ ಆಹಾರ ಪೂರೈಕೆ ಕ್ಷೇತ್ರವಲ್ಲ. ಇದು ಅನೇಕ ಕುಟುಂಬಗಳಿಗೆ ಜೀವನೋಪಾಯ ಒದಗಿಸುವ ಪ್ರಮುಖ ಉದ್ಯಮವಾಗಿದೆ. ಬಡ ವಿದ್ಯಾರ್ಥಿಗಳಿಗೂ ಉದ್ಯೋಗ ಹಾಗೂ ಬದುಕಿಗೆ ದಾರಿ ತೋರಿಸುವ ಕ್ಷೇತ್ರವಾಗಿ ಕೇಟರಿಂಗ್ ಉದ್ಯಮ ಬೆಳೆದಿದೆ ಎಂದರು.
ಕೇಟರಿಂಗ್ ಉದ್ಯಮ ಸುಲಭದ ಕೆಲಸವಲ್ಲ. ಪರಿಶ್ರಮ ಹಾಗೂ ಶ್ರದ್ಧೆಯಿಂದ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ತಾವು ಪೋಸ್ಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೇಟರಿಂಗ್ ಉದ್ಯಮಕ್ಕೆ ಕಾಲಿಟ್ಟಿದ್ದು, ಆರಂಭದಲ್ಲಿ ದಿನಕ್ಕೆ ಸುಮಾರು 100 ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದವರು ಇಂದು ಸುಮಾರು 8 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುವ ಮಟ್ಟಕ್ಕೆ ಬೆಳೆದಿರುವುದಾಗಿ ತಮ್ಮ ಅನುಭವ ಹಂಚಿಕೊಂಡರು.
ಮುಂದಿನ ದಿನಗಳಲ್ಲಿ ಮಂಗಳೂರಿನ ಬೀಚ್‌ಗಳು ಮತ್ತಷ್ಟು ಅಭಿವೃದ್ಧಿಯಾಗಲಿದ್ದು, ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ಕೇಟರಿಂಗ್ ಉದ್ಯಮಕ್ಕೂ ಉತ್ತಮ ಬೇಡಿಕೆ ಸೃಷ್ಟಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಚಂದ್ರಹಾಸ್ ಶೆಟ್ಟಿ ರಂಗೋಲಿ ಮಾತನಾಡಿ, ಯಾವುದೇ ಸಮಾರಂಭ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯುವಲ್ಲಿ ಕೇಟರಿಂಗ್ ಮಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅತಿಥಿಗಳಿಗೆ ಉತ್ತಮ ಊಟೋಪಚಾರ ನೀಡುವುದು ಸಮಾರಂಭದ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ ಎಂದರು.
ಕೇಟರಿಂಗ್ ಉದ್ಯಮಿಗಳು ಹಲವು ಸವಾಲು ಹಾಗೂ ಕಷ್ಟಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘದ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿ ಎಂದು ಆಶಿಸಿದರು.

ಹಿರಿಯರಿಗೆ ಸನ್ಮಾನ :
ಕಳೆದ 40 ವರ್ಷಗಳಿಂದ ಕೇಟರಿಂಗ್ ಉದ್ಯಮದಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ ಚಿಕ್ಕಯ್ಯ ಪೂಜಾರಿ, ಇಬ್ರಾಹಿಂ ಮೋನು ಹಾಗೂ ಲೀನಾ ಲೋಬೊ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪೂಜಾ ಕೇಟರಿಂಗ್ ಮಾಲಕ ಜಯಕೃಷ್ಣ ಕೋಟ್ಯಾನ್ ಅವರನ್ನೂ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭೋಜರಾಜ್ ವಾಮಂಜೂರು, ವಾಲ್ಟರ್ ನಂದಳಿಕೆ, ವೇಣುಗೋಪಾಲ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಕೇಟರಿಂಗ್ ಮಾಲಕರ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಸುಧಾಕರ್ ಕಾಮತ್, ಸಂತೋಷ್ ಡಿಸೋಜಾ, ರಾಜೇಶ್ ಕೆ., ಚೆನ್ನಪ್ಪ ಕುಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Post a Comment

Previous Post Next Post