ಮಂಗಳೂರು: ಮರ್ಸಿ ಬ್ಯೂಟಿ ಅಕಾಡೆಮಿಯ ಬ್ಯೂಟಿ ಥೆರಪಿಸ್ಟ್, ಮೇಕಪ್ ಆರ್ಟಿಸ್ಟ್ ಕೋರ್ಸ್‌ಗಳ ಪದವಿ ಪ್ರದಾನ

ಮಂಗಳೂರು, ಸೆ.16: ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್ ವತಿಯಿಂದ ಬ್ಯೂಟಿ ಥೆರಪಿಸ್ಟ್ ಹಾಗೂ ಮೇಕಪ್ ಆರ್ಟಿಸ್ಟ್ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಬುಧವಾರ ನಡೆಯಿತು.

ಮರ್ಸಿ ಬ್ಯೂಟಿ ಅಕಾಡೆಮಿ ಆವರಣದಲ್ಲಿ  ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆ ಯಕ್ಷಪ್ರಿಯೆ ಅರ್ಷಿಯಾ ಖಾನ್ ಹಾಗೂ ಅಂತಾರಾಷ್ಟ್ರೀಯ ರೂಪದರ್ಶಿ ತಷ್ಮಾ ಚೇತನ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭ ಆರ್ಷಿಯಾ ಖಾನ್ ಮಾತನಾಡಿ, ಬ್ಯೂಟಿ ಥೆರಪಿ, ಮೇಕಪ್ ಕಲೆ ಸೇರಿದಂತೆ ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಬಯಸುವವರಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಮೂಲಕ ಉದ್ಯೋಗ ಹಾಗೂ ಸ್ವಯಂ ಉದ್ಯಮದ ಅವಕಾಶಗಳಿಗೆ ದಾರಿ ಮಾಡಿಕೊಡುವ ಪ್ರಯತ್ನವನ್ನು ಮರ್ಸಿ ವೀಣಾ ಬ್ಯೂಟಿ ಅಕಾಡೆಮಿ ಮಾಡುತ್ತಿದೆ. ಇನ್ನೂ ಹೆಚ್ಚಿನವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ರೂಪದರ್ಶಿ ತಷ್ಮಾ ಚೇತನ್ ಮಾತನಾಡಿ, ಸೌಂದರ್ಯ ಕ್ಷೇತ್ರ ನಿರಂತರವಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಬೇರೆ ಬೇರೆ ರೀತಿಯ ಅವಕಾಶಗಳು ಇದ್ದು,  ಅದಕ್ಕೆ ಸಂಬಂಧಿಸಿದಂತೆ ಪರಿಣತಿಯನ್ನು ಪಡೆದುಕೊಳ್ಳುವುದಕ್ಕೆ ಮರ್ಸಿ ಬ್ಯೂಟಿ ಅಕಾಡೆಮಿಯ ಕೋರ್ಸ್‌ಗಳು ಸಹಕಾರಿಯಾಗಿದೆ ಎಂದರು.

ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವುದರ ಜೊತೆಗೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾವಲಂಬಿ ಭವಿಷ್ಯ ರೂಪಿಸುವ ಉದ್ದೇಶದಿಂದ ಮರ್ಸಿ ಬ್ಯೂಟಿ ಅಕಾಡೆಮಿ ವಿವಿಧ ತರಬೇತಿಗಳನ್ನು ನೀಡುತ್ತಿದೆ. ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು 
ವಿತರಿಸಲಾಯಿತು.

ಮರ್ಸಿ ಬ್ಯೂಟಿ ಅಕಾಡೆಮಿಯ ಮಾಲಕರಾದ ಮರ್ಸಿ ವೀಣಾ ಡಿಸೋಜಾ ಉಪಸ್ಥಿತರಿದ್ದರು.
ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ನೀಕ್ಷಾ‌, ಡೆವಿಟಾ, ಭವಿತಾ ಪ್ರಾರ್ಥಿಸಿದರು.

Post a Comment

Previous Post Next Post