ಮಂಗಳೂರು : ಸಂಗೀತದ ಮೂಲಕ ದೈವಿಕ ಆನಂದವನ್ನು ಹೊಂದಲು ಸಾಧ್ಯ, ಸ್ವಾಮಿ ವಿವೇಕಾನಂದರು ಸಂಗೀತದ ಜ್ಞಾನ ಹೊಂದಿದ್ದರು ಹಾಗೂ ಸಂಗೀತ ಪ್ರೇಮಿಯಾಗಿದ್ದರು ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮನಂದಜಿ ಹೇಳಿದರು.
ಅವರು ಕಲಾಸಾಧನ ಸಂಸ್ಥೆಯ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ನಗರದ ರಾಮಕೃಷ್ಣ ಮಠದಲ್ಲಿ ಭಾನುವಾರ ನಡೆದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಭ್ರಮ ‘ರಾಗಾ ಸುಧಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೃಷ್ಟಿಯ ಆದಿಯಿಂದಲೂ ಸಂಗೀತ ನಮ್ಮೊಂದಿಗೆ ಬೆಸೆದಿದೆ. ಸಂಗೀತದ ಮೂಲಕ ದೈಹಿಕ ಹಾಗೂ ಮಾನಸಿಕ ಶಾಂತಿಯನ್ನು ಹೊಂದಲು ಸಾಧ್ಯ. ರಾಮಕೃಷ್ಣ ಮಠದ ಪ್ರಶಾಂತ ಪರಿಸರದಲ್ಲಿ ಕಲಾಸಾಧನ ತಂಡ ‘ರಾಗಾ ಸುಧಾ’ ಸಂಗೀತ ಸಂಭ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಅವರು ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಖ್ಯಾತ ಹೃದ್ರೋಗ ತಜ್ಞ ಡಾ. ಮೋಹನ್ ಪೈ, ಎಂಆರ್‌ಪಿಎಲ್ ನಿವೃತ್ತ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಶಾಂತ್ ಪೈ, ಶಕ್ತಿನಗರದ ಶಕ್ತಿ ಕಾಲೇಜು ಆಡಳಿತಾಧಿಕಾರಿ ರಮೇಶ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಮಂಗಳೂರು ರೋಟರಿ ಸೆಂಟ್ರಲ್‌ನ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.
ಕಲಾಸಾಧನ ಸಂಸ್ಥೆ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಸ್ವಾಗತಿಸಿದರು. ಪಾಂಡುರಂಗ ಆಚಾರ್ಯ ವಂದಿಸಿದರು. ಶ್ರೀನಿವಾಸ್ ನಾಯಕ್ ಇಂದಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸ್ಮಿತಾ ಅವರು ಕಲಾವಿದರನ್ನು ಪರಿಚಯಿಸಿದರು. ಇದೇ ವೇಳೆ ಕಲಾವಿದರನ್ನು ಸನ್ಮಾನಿಸಲಾಯಿತು.
ಖ್ಯಾತ ಹಿಂದೂಸ್ತಾನಿ ಗಾಯಕ ಪುಣೆಯ ಆದಿತ್ಯ ಮೋದಕ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿ ಬೆಂಗಳೂರಿನ ಅಕ್ಷಯ್ ಜೋಷಿ, ಹಾರ್ಮೋನಿಯಂನಲ್ಲಿ ಯಲ್ಲಾಪುರದ ಸತೀಶ್ ಭಟ್ ಹೆಗ್ಗಾರ್, ತಾನ್ಪುರದಲ್ಲಿ ಮಂಗಳೂರಿನ ಕಾರ್ತಿಕ್ ಹಾಗೂ ಪ್ರದಯ್ ಸಾಥ್ ನೀಡಿದರು.
Post a Comment