ಮಂಗಳೂರು : ಮಂಗಳೂರಿನಲ್ಲಿ ಸೆ.4ರಿಂದ ಸೆ.6ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶವನ್ನು ಹೊರಡಿಸಿದ್ದರು ಆದರೆ ಆ ಆದೇಶಕ್ಕೆ ಯಾವುದೆ ಬೆಲೆ ಇರದಂತೆ ನಗರದ ನಡುವಲ್ಲೇ ಹಲವು ಬಾರ್, ವೈನ್ ಶಾಪ್‌ಗಳು ಲಂಗು ಲಗಾಮಿಲ್ಲದೇ ಮದ್ಯ ಮಾರಾಟದಲ್ಲಿ ತೊಡಗಿದ್ದ ದೃಶ್ಯ ಶನಿವಾರ ಹಲವೆಡೆ ಕಂಡು ಬಂದಿದೆ.
ಸೆ.5ರಂದೇ ನಗರದೆಲ್ಲೆಡೆ ಮೊಸರು ಕುಡಿಕೆ ಉತ್ಸವಗಳು ನಡೆಯುತ್ತಿದ್ದು, ಎಲ್ಲಿಯೂ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಾಡಬಾರದು ಎನ್ನುವ ಆದೇಶವನ್ನು ಹೊರಡಿಸಲಾಗಿತ್ತು ಆದರೆ ಅದಕ್ಕೆ ವಿರುದ್ಧವಾಗಿ ಹಲವು ಮದ್ಯ ಮಾರಾಟದ ಅಂಗಡಿಗಳು ನಡೆದುಕೊಂಡಿದ್ದು, ಹೇಳುವವರು ಕೇಳುವವರು ಯಾರೂ ಇಲ್ಲವೇ ಎನ್ನುವ ಪ್ರಶ್ನೆಗಳು ಮೂಡುತ್ತಿವೆ.
ನಗರದ ನಡುವಿನ ಬಲ್ಲಾಳ್‌ಭಾಗ್ ಸಮೀಪದ ಬಾರ್ ಒಂದರಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರು ಮದ್ಯ ಖರೀದಿ ಮಾಡುತ್ತಿದ್ದ ದೃಶ್ಯಗಳು, ಪದವಿನಂಗಡಿ ಸಮೀಪವೂ ಇದೇ ರೀತಿಯ ದೃಶ್ಯಗಳು ಕಂಡು ಬಂದಿವೆ. ಈ ಬಗ್ಗೆ ಆಡಳಿತ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.
Post a Comment