ತೆಂಕುತಿಟ್ಟಿನ ಹಿರಿಯ ಹಾಗೂ ಸಮರ್ಥ ಯಕ್ಷಗಾನ ಕಲಾವಿದ ಎಂ.ಟಿ.ಸುಂದರ್ ಕುಲಾಲ್ (79) ಅವರು ಸೆ.15ರಂದು ನಿಧನರಾದರು. ಆರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಕಲಾಸೇವೆ ಸಲ್ಲಿಸಿದ್ದ ಅವರು, ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಸೋದರ ಮಾವ ಬೇತಕುಂಞ ಕುಲಾಲ್ ಅವರಿಂದ ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿದ ಅವರು ಧರ್ಮಸ್ಥಳ, ಮುಲ್ಕಿ, ಸುರತ್ಕಲ್, ಕುಂಬ್ಳೆ, ಬಪ್ಪನಾಡು ಹಾಗೂ ಕಟೀಲು ಮೇಳಗಳಲ್ಲಿ ಸತತ ಆರು ದಶಕಗಳ ಕಾಲ ಕಲಾಸೇವೆ ಸಲ್ಲಿಸಿದ್ದರು.
ಬಹುಮುಖ ಪ್ರತಿಭೆಯಾಗಿದ್ದ ಅವರು ರಾಜವೇಷ, ಪೋಷಕ ವೇಷ, ಸ್ತ್ರೀವೇಷ ಹಾಗೂ ಹಾಸ್ಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಲ್ಲದೆ ಭಾಗವತಿಕೆಯಲ್ಲೂ ವಿಶೇಷ ಪರಿಣತಿ ಹೊಂದಿದ್ದರು.
ಇಳಿ ವಯಸ್ಸಿನಲ್ಲೂ ಯಕ್ಷಗಾನ ರಂಗದೊಂದಿಗಿನ ತಮ್ಮ ನಂಟನ್ನು ಮುಂದುವರಿಸಿದ್ದ ಕುಲಾಲ್ ಅವರು ಮೇಳದ ಪ್ರತಿನಿಧಿಯಾಗಿ ಕಲಾಕ್ಷೇತ್ರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರತಿವರ್ಷ ನಡೆಯುವ ಯಕ್ಷನಿಧಿ ಸಮಾವೇಶದಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಕಳೆದ ತಿಂಗಳಷ್ಟೇ ಕಟೀಲು ಮೇಳದ ಅಭಿಮಾನಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಪ್ರತಿಷ್ಠಿತ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಕಳೆದ ವರ್ಷ ಸಂಸ್ಥೆಯ ವತಿಯಿಂದ ₹50 ಸಾವಿರ ನಿಧಿಯನ್ನೊಳಗೊಂಡ ಸುವರ್ಣ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
Post a Comment