ಮಂಗಳೂರು: ಬಂಟ್ಸ್ ಹಾಸ್ಟೇಲ್‌ನಲ್ಲಿ ಸಿದ್ದಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಶ್ರದ್ಧಾ–ಭಕ್ತಿಯ ವಾತಾವರಣದಲ್ಲಿ ಚಾಲನೆ ನೀಡಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಆಯೋಜಿಸಿರುವ ಉತ್ಸವವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಂಟ್ಸ್ ಹಾಸ್ಟೇಲ್‌ನಲ್ಲಿ ನಡೆಯುತ್ತಿರುವ ಗಣೇಶೋತ್ಸವ ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದೆ. ಸತತ ಎರಡನೇ ಬಾರಿ ಗಣೇಶೋತ್ಸವ ಉದ್ಘಾಟಿಸುವ ಅವಕಾಶ ತಮಗೆ ದೊರೆತಿರುವುದು ಸುದೈವ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಆಶಯಕ್ಕೆ ಪೂರಕವಾಗಿ ಗಣೇಶೋತ್ಸವಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಧ್ವಜಾವರೋಹಣ ನೆರವೇರಿಸಿ ಮಾತನಾಡಿದ ಗ್ರೂಪ್ ಕ್ಯಾಪ್ಟನ್ ಎಸ್.ಎಂ. ಅಡ್ಯಂತಾಯ, ಬಂಟ ಸಮುದಾಯವು ಶ್ರೀಮಂತ ಪರಂಪರೆ ಮತ್ತು ಸಾಮಾಜಿಕ ಕೊಡುಗೆಗಳ ಹಿನ್ನೆಲೆ ಹೊಂದಿದೆ. ಶಿಕ್ಷಣ, ಆಡಳಿತ, ವೈದ್ಯಕೀಯ, ಕಾನೂನು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದವರು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಮಾತೃ ಸಂಘದ ಮಾಜಿ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ ಹಾಗೂ ನಳಿನಿ ಆರ್. ಹೆಗ್ಡೆ ಅವರು ತೆನೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಗೀತಾ ಅಡ್ಯಂತಾಯ, ಮಾಳವಿಕಾ ಜಯಾನಂದ್, ದಂಬೆಕಾನ ಸದಾಶಿವ ರೈ, ಪದ್ಮನಾಭ ರೈ, ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಜೆ. ಸತ್ಯಪ್ರಸಾದ್ ಶೆಟ್ಟಿ, ಶೇಖರ ಶೆಟ್ಟಿ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪ್ರಸ್ತಾವಿಸಿ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರುಗುತ್ತು ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಅವರ ಪತ್ನಿಯನ್ನು ಮತ್ತು ಬಾಲ ಸಂಗೀತ ಪ್ರತಿಭೆ ಅಜಿಂತ್ಯ ರೈ ಅವರನ್ನು ಸನ್ಮಾನಿಸಲಾಯಿತು.
Post a Comment