ಕುಣಿಗಲ್: ತವರು ಮನೆಗೆ ತೆರಳಿದ ಪತ್ನಿ ಆಷಾಢ ಮುಗಿದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆ !

ಕುಣಿಗಲ್ ಪಟ್ಟಣದ ಮಹಾವೀರ ನಗರದಲ್ಲಿ ಪತ್ನಿ ಆಷಾಢ ಮಾಸಕ್ಕೆ ತವರು ಮನೆಗೆ ತೆರಳಿ ವಾಪಸ್ ಬಾರದ ಹಿನ್ನೆಲೆಯಲ್ಲಿ ಮನನೊಂದು ಪತಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು 28 ವರ್ಷದ ಅವಿನಾಶ್ ಎಂದು ಗುರುತಿಸಲಾಗಿದೆ. ಸುಮಾರು ಆರು ತಿಂಗಳ ಹಿಂದಷ್ಟೇ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಯುವತಿಯನ್ನು ಅವಿನಾಶ್ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.

ಆಷಾಢ ಮಾಸದ ಹಿನ್ನೆಲೆಯಲ್ಲಿ ಅವಿನಾಶ್ ಅವರ ಪತ್ನಿ ತವರು ಮನೆಗೆ ತೆರಳಿದ್ದರು. ಬಳಿಕ ಅವಿನಾಶ್ ಪತ್ನಿಗೆ ಕರೆ ಮಾಡಿ ಮನೆಗೆ ವಾಪಸ್ ಬರುವಂತೆ ತಿಳಿಸಿದ್ದರು. ಆದರೆ, ತಾನು ಸದ್ಯಕ್ಕೆ ವಾಪಸ್ ಬರುವುದಿಲ್ಲ ಎಂದು ಪತ್ನಿ ಹೇಳಿದ್ದಾಗಿ ತಿಳಿದುಬಂದಿದೆ.

ಪತ್ನಿ ಮನೆಗೆ ವಾಪಸ್ ಬಾರದ ವಿಚಾರದಿಂದ ಅವಿನಾಶ್ ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದು ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Post a Comment

Previous Post Next Post