ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವವನ್ನು ಈ ಬಾರಿ "ದಶ ವೈಭವ" ಪರಿಕಲ್ಪನೆಯಡಿ ವೈಭವಯುತವಾಗಿ ಆಚರಿಸಲು ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿ. ಜನಾರ್ದನ ಪೂಜಾರಿ ಅವರ ಆಶಯದಂತೆ ಈ ಬಾರಿಯೂ ಕಿನ್ನಿಪಿಲಿ ಪಂಥ, ಮುದ್ದು ಶಾರದೆ, ಮಕ್ಕಳ ದಸರಾ, ಕಾಲೇಜು ಮಟ್ಟದ ಜನಪದ ಸ್ಪರ್ಧೆ, ಕವಿಗೋಷ್ಠಿ, ಮ್ಯಾರಥಾನ್, ರುದ್ರತಾಂಡವ ನೃತ್ಯ, ಮಹಿಳಾ ದಸರಾ ಸೇರಿದಂತೆ 10 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ದಸರಾ ಅವಧಿಯಲ್ಲಿ ಪ್ರತಿನಿತ್ಯ ಅಕ್ಷರಾಭ್ಯಾಸ, ಚಂಡಿಕಾಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣವೇಷ ಸ್ಪರ್ಧೆ ಹಾಗೂ ನಾರಾಯಣಗುರು ಪೂಜೆ, ವರಮಹಾಲಕ್ಷ್ಮೀ ಪೂಜೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮಗಳೂ ಜರುಗಲಿವೆ. ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚುವರಿ ಜಾಗ ಖರೀದಿ, ಅನ್ನಸಭಾಗೃಹ ಆಧುನೀಕರಣ ಹಾಗೂ ಪಾಕಶಾಲೆ ನವೀಕರಣ ಕಾಮಗಾರಿಗಳೂ ಕೈಗೆತ್ತಿಕೊಳ್ಳಲಾಗಿದೆ.
ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಮಂಗಳೂರು ದಸರಾ ಉಳಿದೆಡೆ ಇರುವಂತೆ ಕೇವಲ ಸಾಂಸ್ಕೃತಿಕ ದಸರಾವಲ್ಲ, ಧಾರ್ಮಿಕ ಉತ್ಸವವಾಗಿದೆ. ವಿಶ್ವದಾದ್ಯಂತ ಕ್ಷೇತ್ರಕ್ಕೆ ಭಕ್ತಾದಿಗಳ ದಂಡು ಬರುತ್ತಿದ್ದು, ಮಂಗಳೂರು ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸೋಣ. ಮಂಗಳೂರು ದಸರಾ ಮಹೋತ್ಸವಕ್ಕೆ ರಾಜ್ಯ ಸರಕಾರದ ಸಹಕಾರವೂ ಅಗತ್ಯವಿದೆ ಎಂದರು.
ಈ ಸಂದರದಭ ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಎಚ್. ಸೋಮ್‌ಸುಂದರ್, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕೃತಿನ್ ಡಿ. ಅಮೀನ್, ಕಿಶೋರ್ ಕುಮಾರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಉಪಾದ್ಯಕ್ಷರಾದ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರೀಶ್ ಕುಮಾರ್, ಸೂರ್ಯಕಾಂತ್ ಜೆ. ಸುವರ್ಣ, ವಾಸುದೇವ ಕೋಟ್ಯಾನ್, ವಸಂತ ಕಾರಂದೂರು, ಲತೀಶ್ ಕೋಟ್ಯಾನ್, ಗೌರವಿ ರಾಜಶೇಖರ್, ಶೈಲೇಂದ್ರ ವೈ. ಸುವರ್ಣ, ರಾಧಾಕೃಷ್ಣ, ಲೀಲಾಕ್ಷ ಕರ್ಕೇರಾ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ನಾನಾ ಸಂಘ-ಸಂಸ್ಥೆಗಳು ಮುಖ್ಯಸ್ಥರು ಯಶಸ್ವಿ ಮಂಗಳೂರು ದಸರಾ ಮಹೋತ್ಸವಕ್ಕೆ ತಮ್ಮ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು.
ಕ್ಷೇತ್ರದ ಅರ್ಚಕ ವೃಂದ ಪ್ರಾರ್ಥನೆ ಸಲ್ಲಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
Post a Comment