ಮಂಗಳೂರು: ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರು ಹಾಗೂ ಜನಪ್ರತಿನಿಧಿಗಳ ಬಹುಕಾಲದ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ರೈಲ್ವೆ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಈ ಬದಲಾವಣೆ 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಹೊಸ ವ್ಯವಸ್ಥೆಯಂತೆ, ಉಳ್ಳಾಲ ನಿಲ್ದಾಣ ಸೇರಿದಂತೆ ಉಳ್ಳಾಲದವರೆಗೆ ಇರುವ ಮಂಗಳೂರು ರೈಲ್ವೆ ಪ್ರದೇಶ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಗೊಳ್ಳಲಿದೆ. ಇದರೊಂದಿಗೆ ನೈರುತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವಿನ ರೈಲು ವಿನಿಮಯ ಕೇಂದ್ರವೂ ಪಡೀಲ್‌ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.
ಇದೇ ವೇಳೆ, ತೋಕೂರು ನಿಲ್ದಾಣವು ಹಿಂದಿನಂತೆಯೇ ಕೊಂಕಣ ರೈಲ್ವೆ (KRCL) ವ್ಯಾಪ್ತಿಯಲ್ಲೇ ಮುಂದುವರಿಯಲಿದೆ. ತೋಕೂರು ನಿಲ್ದಾಣವು ಕೊಂಕಣ ರೈಲ್ವೆ ಹಾಗೂ ನೈರುತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ಸಿಬ್ಬಂದಿಗೆ ಆಯ್ಕೆ ಅವಕಾಶ :
ವ್ಯಾಪ್ತಿ ಬದಲಾವಣೆಯ ಹಿನ್ನೆಲೆಯಲ್ಲಿ ರೈಲ್ವೆ ಸಿಬ್ಬಂದಿಯ ನಿರ್ವಹಣೆಯಲ್ಲೂ ಬದಲಾವಣೆ ನಡೆಯಲಿದೆ. ಗೆಜೆಟೆಡ್ ಅಧಿಕಾರಿಗಳ ವಲಯ ಬದಲಾವಣೆ ಹಾಗೂ ಹುದ್ದೆಗಳ ವರ್ಗಾವಣೆಗೆ ಸಂಬಂಧಿಸಿದ ಆದೇಶಗಳನ್ನು ನಿಯಮಾನುಸಾರ ಹೊರಡಿಸಲಾಗುತ್ತದೆ.
ನಾನ್-ಗೆಜೆಟೆಡ್ ನೌಕರರನ್ನು ಪ್ರಸ್ತುತ ಸ್ಥಳದಲ್ಲೇ ‘As is where is basis’ ಆಧಾರದ ಮೇಲೆ ನಿಯೋಜಿಸಲಾಗುತ್ತದೆ. ಆದರೆ, ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಬೇಕೇ ಅಥವಾ ನೈರುತ್ಯ ರೈಲ್ವೆಗೆ ಸೇರಬೇಕೇ ಎಂಬ ಬಗ್ಗೆ ಲಿಖಿತ ಆಯ್ಕೆ ನೀಡಲಾಗುತ್ತದೆ. ನೈರುತ್ಯ ರೈಲ್ವೆಯನ್ನು ಆಯ್ಕೆ ಮಾಡುವ ಸಿಬ್ಬಂದಿಯ ಜ್ಯೇಷ್ಠತೆಯನ್ನು ಅವರ ಪ್ರಸ್ತುತ ಗ್ರೇಡ್‌ನಲ್ಲಿನ ಸೇವಾ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಅಕ್ಟೋಬರ್ 1ರಿಂದ ಜಾರಿ :
ರೈಲ್ವೆ ವಲಯ ಮತ್ತು ವಿಭಾಗಗಳ ನಿಖರ ಗಡಿಗಳ ವಿವರಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆಯಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
ಅಕ್ಟೋಬರ್ 1ರಿಂದ ಬದಲಾವಣೆ ಅಧಿಕೃತವಾಗಿ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ, ಹುದ್ದೆಗಳ ವರ್ಗಾವಣೆ, ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ, ಕಂಟ್ರೋಲ್ ಬೋರ್ಡ್‌ಗಳ ಹಸ್ತಾಂತರ ಸೇರಿದಂತೆ ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ತಕ್ಷಣ ಆರಂಭಿಸುವಂತೆ ರೈಲ್ವೆ ಮಂಡಳಿ ಹುಬ್ಬಳ್ಳಿ, ಚೆನ್ನೈ ಹಾಗೂ ನವಿ ಮುಂಬೈಯ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ಕರಾವಳಿ ಭಾಗದ ರೈಲ್ವೆ ಆಡಳಿತದಲ್ಲಿ ಮಹತ್ವದ ಬದಲಾವಣೆ ಸಂಭವಿಸಲಿದ್ದು, ರೈಲು ಸೇವೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಇದರಿಂದ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
Post a Comment