ಬಂಟ್ವಾಳ | ಪುಂಜಾಲಕಟ್ಟೆಯಲ್ಲಿ ಹಾಡಹಗಲೇ ತಲವಾರು ತೋರಿಸಿ ಸಿಮೆಂಟ್ ವ್ಯಾಪಾರಿಯಿಂದ ₹8 ಲಕ್ಷ ದರೋಡೆ

ಬಂಟ್ವಾಳ: ಮಣಿಹಳ್ಳ–ಕಕ್ಯಪದವು ರಸ್ತೆಯ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬಲ್ಲಿ ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ₹8 ಲಕ್ಷ ಹಣ ದರೋಡೆ ಮಾಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಸುರತ್ಕಲ್ ನಿವಾಸಿ ಮಯ್ಯದಿ ಅವರು ಅಂಗಡಿಗಳಿಗೆ ಸಗಟು ದರದಲ್ಲಿ ಸಿಮೆಂಟ್ ಪೂರೈಕೆ ಮಾಡುವ ವ್ಯವಹಾರ ನಡೆಸುತ್ತಿದ್ದು, ಅಂಗಡಿಗಳಿಂದ ಸಂಗ್ರಹಿಸಿದ ಕಲೆಕ್ಷನ್ ಹಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅವರನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಆರೋಪಿಗಳು ಮಯ್ಯದಿ ಅವರ ಬೈಕ್‌ಗೆ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ತಲವಾರು ತೋರಿಸಿ ಬೆದರಿಸಿ, ಅವರ ಬಳಿಯಿದ್ದ ಹಣದ ಬ್ಯಾಗ್‌ನ್ನು ಕಸಿದುಕೊಂಡಿದ್ದಾರೆ. ಏಕಾಏಕಿ ನಡೆದ ದಾಳಿಯಿಂದ ಮಯ್ಯದಿ ಅವರು ಭಯಭೀತರಾಗಿದ್ದು, ಆರೋಪಿಗಳು ಹಣದ ಬ್ಯಾಗ್‌ ಸಮೇತ ಬೈಕ್‌ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ ಹಾಗೂ ಅವರ ಚಲನವಲನದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಸಾಧ್ಯತೆಯಿದ್ದು, ಆರೋಪಿಗಳ ಗುರುತು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಹಾಡಹಗಲೇ ಪ್ರಮುಖ ರಸ್ತೆಯಲ್ಲಿ ತಲವಾರು ತೋರಿಸಿ ಹಣ ದರೋಡೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Post a Comment

Previous Post Next Post