ಮಂಗಳೂರು, ಜು. 25: ನಗರದ ಲಾಲ್‌ಬಾಗ್ ಸಿಗ್ನಲ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದ ಭೀಕರ ಹಲ್ಲೆ ಪ್ರಕರಣ ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ ಸುಮಾರು 1:45ರ ವೇಳೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬ ಮಾರಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ರೌಡಿ ಶೀಟರ್ ವಿಕ್ಕಿ ಬಪ್ಪಾಲ್ ಎಂದು ಪ್ರಾಥಮಿಕವಾಗಿ ಗುರುತಿಸಲಾಗಿದೆ. ದುಷ್ಕರ್ಮಿಯು ಚಲಿಸುತ್ತಿದ್ದ ಬೈಕ್‌ನಲ್ಲೇ ವಿಕಿ ಬಪ್ಪಾಲ್ ಅವರನ್ನು ಹಿಂಬಾಲಿಸಿ, ಸೂಕ್ತ ಅವಕಾಶ ಸಿಕ್ಕಾಗ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ವಿಕಿ ಬಪ್ಪಾಲ್‌ನನ್ನು ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬರ್ಕೆ ಪೊಲೀಸ್ ಠಾಣೆ ಹಾಗೂ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಪರಾರಿಯಾಗಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಅಲರ್ಟ್ ಮಾಡಲಾಗಿದ್ದು, ವಾಹನಗಳ ತಪಾಸಣೆ ನಡೆಸಿ ಆರೋಪಿಗಾಗಿ ವ್ಯಾಪಕ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದ್ದು, ಹಲ್ಲೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ವೈಷಮ್ಯ ಅಥವಾ ಇತರ ಕಾರಣಗಳಿಂದ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಆರೋಪಿಯನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
Post a Comment