ಸೊಮಾಲಿಯಾ ಬಳಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟರ್ಕಿಶ್ ಹಡಗು ಹೈಜಾಕ್; 6 ಭಾರತೀಯರು ಸೇರಿ 10 ಮಂದಿಯ ಅಪಹರಣ

ಸೊಮಾಲಿಯಾ: ಸೊಮಾಲಿಯಾದ ಪಂಟ್ಲ್ಯಾಂಡ್ ಕರಾವಳಿ ಬಳಿ ಟರ್ಕಿಶ್ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ವಾಣಿಜ್ಯ ಹಡಗನ್ನು ಎಂಟು ಮಂದಿ ಶಸ್ತ್ರಸಜ್ಜಿತ ಕಡಲ್ಗಳ್ಳರು ಹೈಜಾಕ್ ಮಾಡಿರುವ ಘಟನೆ ನಡೆದಿದೆ. M/V LUTUF ಹೆಸರಿನ ಈ ಹಡಗಿನಲ್ಲಿದ್ದ ಆರು ಭಾರತೀಯ ನಾವಿಕರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿಯನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ.

ಕ್ಯಾಮರೂನ್ ಧ್ವಜ ಹೊಂದಿರುವ M/V LUTUF ಹಡಗು ಪಂಟ್ಲ್ಯಾಂಡ್‌ನ ಐಲ್ ಜಿಲ್ಲೆಯ ಮರ್ರಾಯ್ ಕರಾವಳಿಯಿಂದ ಸುಮಾರು 3.5 ನಾಟಿಕಲ್ ಮೈಲು ದೂರದಲ್ಲಿದ್ದಾಗ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಹಡಗನ್ನು ಪಂಟ್ಲ್ಯಾಂಡ್‌ನ ಡ್ಯಾಂಗೊರೊಯೊ ಜಿಲ್ಲೆಯ ಗರ್ಮಾಲ್ ಸಮೀಪದ ನುಗಾಲ್ ಕರಾವಳಿಯತ್ತ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಹಡಗಿನಲ್ಲಿ ಟರ್ಕಿಶ್ ಶಸ್ತ್ರಾಸ್ತ್ರಗಳ ಜತೆಗೆ ಸಂವಹನ ಮತ್ತು ಉಪಗ್ರಹ ಉಪಕರಣಗಳನ್ನು ಮೊಗಾದಿಶುವಿನ ಮಿಲಿಟರಿ ತರಬೇತಿ ಸೌಲಭ್ಯಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಅಪಹರಣಕ್ಕೊಳಗಾದ 10 ಮಂದಿಯಲ್ಲಿ ಆರು ಭಾರತೀಯರು, ಓರ್ವ ಟರ್ಕಿಶ್ ಪ್ರಜೆ, ಓರ್ವ ಜಾರ್ಜಿಯನ್ ಪ್ರಜೆ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.

ಘಟನೆ ಬಳಿಕ ಟರ್ಕಿ ಡ್ರೋನ್‌ಗಳು ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಪ್ರದೇಶದ ಮೇಲೆ ನಿಗಾ ಇರಿಸಿದೆ ಎನ್ನಲಾಗಿದೆ. ಆದರೆ ಹಡಗು ಹೈಜಾಕ್ ಹಾಗೂ ಭಾರತೀಯ ನಾವಿಕರ ಅಪಹರಣದ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಅಥವಾ ಟರ್ಕಿ ಅಧಿಕಾರಿಗಳಿಂದ ಈವರೆಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

Post a Comment

Previous Post Next Post