ನವದೆಹಲಿ, ಜು. 22: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಬೆಳವಣಿಗೆಯಲ್ಲಿ ಮರು ತನಿಖೆಯ ಅಗತ್ಯವನ್ನು ಒಪ್ಪಿಕೊಂಡಿದ್ದು, ಯಾವ ಸಂಸ್ಥೆ ಅಥವಾ ಯಾವ ಮಾದರಿಯಲ್ಲಿ ತನಿಖೆ ನಡೆಯಬೇಕು ಎಂಬ ಕುರಿತು ಅಂತಿಮ ಆದೇಶವನ್ನು ಕಾಯ್ದಿರಿಸಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ ಸಿಬಿಐ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ತನಿಖಾಧಿಕಾರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿ ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.
"14 ವರ್ಷಗಳಾದರೂ ಸಮರ್ಪಕ ತನಿಖೆ ನಡೆದಿಲ್ಲ. ಸಾಕ್ಷಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಂತಿಮ ಆದೇಶದ ಬಳಿಕ ಮಧ್ಯಂತರ ವರದಿಯನ್ನು ಕೇಳುತ್ತೇವೆ. ಎಸ್‌ಐಟಿ ರಚನೆ ಬಗ್ಗೆ ನಾವು ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಸುಪ್ರೀಂ ಕೋರ್ಟ್ ತಿಳಿಸಿತು.
ಪ್ರಕರಣದ ಮರು ತನಿಖೆಯನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸುವಂತೆ ಸೌಜನ್ಯ ಅವರ ತಾಯಿ ಮನವಿ ಸಲ್ಲಿಸಿದ್ದು, ಮತ್ತೊಂದೆಡೆ ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ರಾಜ್ಯ ಸರ್ಕಾರ ಎಸ್‌ಐಟಿ ರಚನೆಗೆ ಸಮ್ಮತಿ ಸೂಚಿಸಿರುವುದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅಂತಿಮವಾಗಿ ಯಾವ ತನಿಖಾ ಸಂಸ್ಥೆ ಅಥವಾ ಯಾವ ರೀತಿಯ ತನಿಖೆ ನಡೆಸಬೇಕು ಎಂಬುದನ್ನು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದೆ.
ಸಿಬಿಐ ವಿರುದ್ಧ ಸುಪ್ರೀಂ ಕಿಡಿ :
ವಿಚಾರಣೆ ವೇಳೆ ಸಿಬಿಐ ತನಿಖೆಯ ಗುಣಮಟ್ಟವನ್ನು ತೀವ್ರವಾಗಿ ಪ್ರಶ್ನಿಸಿದ ನ್ಯಾಯಪೀಠ, "ಸಿಬಿಐ ವರದಿಯನ್ನು ಕೇವಲ ಭಾಷಾಂತರ ಮಾಡಲಾಗಿದೆ. ತನಿಖಾಧಿಕಾರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಕೆಳ ನ್ಯಾಯಾಲಯದಲ್ಲಿ ಇನ್ನೂ ಕೆಲವರ ವಿರುದ್ಧ ತನಿಖೆ ನಡೆಸಬೇಕು ಎಂದು ಸಿಬಿಐ ಹೇಳಿತ್ತು. ಈಗ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯನ್ನು ನೆಪವಾಗಿ ಹೇಳುವುದು ಸಮಂಜಸವಲ್ಲ," ಎಂದು ಕಠಿಣವಾಗಿ ತರಾಟೆಗೆ ತೆಗೆದುಕೊಂಡಿತು.
ದೇಶದಾದ್ಯಂತ ಗಮನ ಸೆಳೆದಿರುವ ಸೌಜನ್ಯ ಪ್ರಕರಣದಲ್ಲಿ ಮರು ತನಿಖೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿರುವುದು ಪ್ರಕರಣದ ಮುಂದಿನ ಹಂತದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಈಗ ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶದ ಬಳಿಕ ತನಿಖೆಯ ರೂಪುರೇಷೆ ಹಾಗೂ ಅದನ್ನು ನಡೆಸುವ ಸಂಸ್ಥೆಯ ಕುರಿತು ಸ್ಪಷ್ಟತೆ ಸಿಗಲಿದೆ.
Post a Comment