Udupi | ಡೇವಿಡ್ ಡಿಸೋಜಾ ಕೊಲೆ ಆರೋಪಿ ರಾಜು ಬಂಧನ ; ತಪ್ಪಿಸಿಕೊಳ್ಳಲು ಯತ್ನ, ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದ ಪೊಲೀಸರು

ಉಡುಪಿ:  ಕಾಪು ತಾಲೂಕಿನ ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ನಡೆದ ಡೇವಿಡ್ ಡಿಸೋಜ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಪು ಪಿಎಸ್‌ಐ ತೇಜಸ್ವಿ ಹಾಗೂ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ನೇತೃತ್ವದ ತಂಡ ಕೊಲೆ ಪ್ರಕರಣದ ಆರೋಪಿ ರಾಜುವನ್ನು ಬಂಧಿಸಿ ಕರೆತರುತ್ತಿದ್ದ ವೇಳೆ, ಬೈಂದೂರು ಬಳಿ ಒತ್ತಿನೆಣೆ ಸಮೀಪ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಈ ಸಂದರ್ಭ ಆರೋಪಿ ಪರಾರಿಯಾಗುವುದನ್ನು ತಡೆಯಲು ಕಾಪು ಪಿಎಸ್‌ಐ ತೇಜಸ್ವಿ ಅವರು ಸರ್ವೀಸ್ ಪಿಸ್ತೂಲಿನಿಂದ ರಾಜುವಿನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಯಲ್ಲಿ ಪಿಎಸ್‌ಐ ತೇಜಸ್ವಿ ಅವರಿಗೂ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ ತೇಜಸ್ವಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Post a Comment

Previous Post Next Post