ಪೈವಳಿಕೆ, ಜುಲೈ 14: ಪೈವಳಿಕೆ ಗ್ರಾಮದ ಲಾಲ್‌ಬಾಗ್–ಚಿಪ್ಪಾರು–ಕುರುಡಪದವು ರಸ್ತೆ ಅಗಲೀಕರಣ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿದ್ದು, ವರ್ಷದ ಮೊದಲ ಮಳೆಯಲ್ಲೇ ಹೊಸದಾಗಿ ನಿರ್ಮಿಸಿರುವ ರಸ್ತೆ ಹಾಳಾಗತೊಡಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ರಸ್ತೆ ನಿರ್ಮಾಣಕ್ಕಾಗಿ ಹಲವು ವರ್ಷಗಳ ಕಾಲ ಸಾರ್ವಜನಿಕರು ಹೋರಾಟ ನಡೆಸಿ, ವಿವಿಧ ಸರ್ಕಾರಿ ಕಚೇರಿಗಳಿಗೆ ಅಲೆದು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದು ಕಾಮಗಾರಿಯನ್ನು ಮಂಜೂರು ಮಾಡಿಸಿದ್ದರು. ಆದರೆ ರಸ್ತೆ ಕಾಮಗಾರಿ ಪೂರ್ಣಗೊಂಡು ಕೇವಲ ಎರಡು ತಿಂಗಳು ಕಳೆದಿರುವಾಗಲೇ ಡಾಂಬರು ಎದ್ದು ಹೊಂಡಗಳು ಕಾಣಿಸಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಳಾದ ರಸ್ತೆಗೆ ಗುತ್ತಿಗೆದಾರರು ತೇಪೆ (ಪ್ಯಾಚ್ ವರ್ಕ್) ಹಾಕುವ ಮೂಲಕ ಸಮಸ್ಯೆ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದು, ತೇಪೆ ಕೆಲಸದ ಬದಲು ಸಂಪೂರ್ಣ ರಸ್ತೆ ಮರು ಡಾಂಬರೀಕರಣ (Re-taring) ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ರಸ್ತೆ ಬದಿಯ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಮಳೆನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ತಿರುವುಗಳಲ್ಲಿ ಮಣ್ಣಿನ ರಾಶಿ ಸೇರಿರುವುದರಿಂದ ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಲಾಲ್‌ಬಾಗ್, ಚಿಪ್ಪಾರು ಹಾಗೂ ಕುರುಡಪದವು ವ್ಯಾಪ್ತಿಯ ಯುವ ಸಂಘಟನೆಗಳು ಮತ್ತು ಗ್ರಾಮಸ್ಥರು ಒಂದಾಗಿ ಹೋರಾಟ ನಡೆಸಿ, ಕಳಪೆ ಕಾಮಗಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಬೇಕಾಗಿದೆ ಎಂದು ಸಾರ್ವಜನಿಕರು ಕರೆ ನೀಡಿದ್ದಾರೆ.
"ಇದು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗಿರುವ ರಸ್ತೆ. ಆದ್ದರಿಂದ ಗುಣಮಟ್ಟದ ಕಾಮಗಾರಿ ನಡೆಯುವಂತೆ ಪ್ರಶ್ನಿಸುವ ಹಕ್ಕು ಗ್ರಾಮಸ್ಥರಿಗೆ ಇದೆ. ತೇಪೆ ಕೆಲಸವಲ್ಲ, ಸಂಪೂರ್ಣ ಮರು ಡಾಂಬರೀಕರಣವೇ ಆಗಬೇಕು" ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Post a Comment