ಬಂಟ್ವಾಳ: ಬಂಟ್ವಾಳದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದ ಬಳಿ ಹರಿತಾಯುಧದಿಂದ ಹಲ್ಲೆಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯನ್ನು ಚೇತನ್ ಎಂದು ಗುರುತಿಸಲಾಗಿದ್ದು, ಆತ ಮೃತ ಯುವತಿಯ ದೂರದ ಸಂಬಂಧಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಯುವತಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮೃತ ಯುವತಿ ಬಂಟ್ವಾಳ ಉಳಿಗ್ರಾಮ ನಿವಾಸಿ ಲಾವಣ್ಯ (21) ಹಾಗೂ ಆರೋಪಿತ ಬೆಳ್ತಂಗಡಿ ಒಡಿಲ್ನಾಳ ನಿವಾಸಿ ಚೇತನ್ ಎನ್ನಲಾಗಿದೆ. ಲಾವಣ್ಯ ಎಂಬವರು ಗುರುವಾರ ಸಂಜೆ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಯುವತಿಯ ಮೇಲೆ ಆರೋಪಿ ಹರಿತವಾದ ಆಯುಧದಿಂದ ದಾಳಿ ನಡೆಸಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Post a Comment