ಮಂಗಳೂರು, ಜು. 22: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ಯಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದಿಂದ ತೆರವಾಗಿದ್ದ ಜಿಲ್ಲಾ ಖಾಝಿ ಹುದ್ದೆಗೆ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ ಶಿಹಾಬುದ್ದೀನ್ ತಂಜಳ್ ಅವರು ಬುಧವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಕೇರಳದ ಮಲಪ್ಪುರಂ ಜಿಲ್ಲೆಯ ಪೂವಾಡ್ ಮೂಲದ ತಂಜಳ್ ಅವರು ಧಾರ್ಮಿಕ ಶಿಕ್ಷಣ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಹಲವು ಮಸೀದಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಖತೀಬ್, ಮುದರ್ರಿಸ್ ಹಾಗೂ ಖಾಝಿಯಾಗಿ ಸೇವೆ ಸಲ್ಲಿಸಿರುವ ಅವರು, 2009ರಿಂದ ಕಲ್ಲಿಕೋಟೆಯ ಗ್ರಾಂಡ್ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳ 370ಕ್ಕೂ ಹೆಚ್ಚು ಮೊಹಲ್ಲಾಗಳ ಖಾಝಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ತಂಜಳ್ ಅವರು, ವಯನಾಡಿನ ಇಮಾಮ್ ಗಝಾಲಿ ಅಕಾಡೆಮಿಯ ಜೊತೆಗೆ ರಶೀದಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಅಲ್ಲದೆ, ಸುನ್ನಿ ಮಹಲ್ಸ್ ಫೆಡರೇಶನ್, ಜಿಲ್ಲಾ ಮಸ್ಲಹತ್ ಸಮಿತಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡಿದ್ದಾರೆ.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಯ್ಯದುಲ್ ಉಮ್ಮ ಸ್ವಾಧಿಕ್ ಅಲಿ ಶಿಹಾಬ್ ತಂಜಳ್, ಸಮಸ್ತ ಮುಶಾವರ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಕೋಶಾಧಿಕಾರಿ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್, ಸೈಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಬಳ್, ಸೈಯ್ಯದ್ ಹಮೀದ್ ಅಲಿ ಶಿಹಾಬ್ ತಂಜಳ್, ಸೈಯ್ಯದ್ ಆಟಕೋಯ ಕುಂಬೋಳ್ ತಂಬಳ್, ಸೈಯ್ಯದ್ ಅಲಿ ತಂಬಳ್ ಕುಂಬೋಳ್, ಲಕ್ಷದ್ವೀಪ ಖಾಝಿ ಇ.ಪಿ. ಸೈದಾಲಿ ತಂಬಳ್, ಸೈಯ್ಯದ್ ಝನುಲ್ ಅಬಿದೀನ್ ತಂಬಳ್, ಉಸ್ಮಾನುಲ್ ಫೈಝಿ ತೋಡಾರ್, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ್, ಅಬ್ದುಲ್ ಸಮದ್ ಪೂಕೋಟೂರು ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದು, ನೂತನ ಜಿಲ್ಲಾ ಖಾಝಿಗೆ ಶುಭಾಶಯ ಕೋರಿದರು.
Post a Comment